ಕನ್ನಡ ಕವನಗಳು – ಕನ್ನಡ ಪ್ರೇಮ ಕವನಗಳು – Kannada Kavanagalu – Kannada Love Poems

You are currently viewing ಕನ್ನಡ ಕವನಗಳು – ಕನ್ನಡ ಪ್ರೇಮ ಕವನಗಳು – Kannada Kavanagalu – Kannada Love Poems

About the Author :

director satishkumar images

ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

1) 25 ಕಾಡುವ ಪ್ರೇಮ ಕವನಗಳು : Kannada Kavanagalu – Sad Love Poems in Kannada 

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

೧) ಮನದಲಿ ಆಸೆಗಳು ನೂರಾರು,
ಆದರೆ ಅವುಗಳಿಗೆ ಆಸರೆ ಯಾರು?
ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ
ಅವುಗಳಿಗೆ ಸ್ಪೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು?

೨) ಕರೆದಾಗ ಬರದಿರುವವಳು,
ಕನಸಲ್ಲಿ ಕರೆಯದೇನೆ ಹೇಗೆ ಬಂದಳು?
ಕೈಗೆ ಎಟುಕದವಳು,
ಕನಸಿಗೆ ಹೇಗೆ ಎಟುಕಿದಳು?
ಕಣ್ಣಿಗೆ ಕಾಣಿಸದವಳು,
ಮನಸಿಗೆ ಹೇಗೆ ಕಾಣಿಸಿದಳು?

೩) ಅವಳ ಸೌಂದರ್ಯಕ್ಕೆ ನಾ ಮಾರು ಹೋಗಲಿಲ್ಲ. ಅವಳ ಸಂಪತ್ತಿಗೆ ನಾ ಮೋರೆ ಇಡಲಿಲ್ಲ. ಅವಳ ಪ್ರೀತಿಗೆ ನಾ ಕೈ ಚಾಚಲಿಲ್ಲ. ಹೀಗಿರುವಾಗ ಅವಳೇಕೆ ಕನಸಲ್ಲಿ ಬಂದು ನನ್ನ ಕಾಡೋದನ್ನ ಬಿಡ್ತಿಲ್ಲ?

೪) ಅವಳಿಗೆ ನನ್ನೆದೆಯೊಳಗೆ ಬರುವಾಗ “ಒಳಗೆ ಬರಲಾ?” ಅಂತಾ ಕೇಳುವ ಸೌಜನ್ಯವಿರಲಿಲ್ಲ. ಆದ್ರೆ ಕಡೇಪಕ್ಷ ಹೋಗುವಾಗ “ಹೋಗಿ ಮತ್ತೆ ಬರ್ತೀನಿ..” ಅಂತಾ ಹೇಳಿ ಹೋಗಬಹುದಿತ್ತಲ್ಲ..?

೫) ಆಮಂತ್ರಣವಿಲ್ಲದೆ ಬಂದೆ ಹೃದಯದ ಮನೆಗೆ, ಅನುಮತಿಯಿಲ್ಲದೆ ತಾಯಿಯಾದೆ ನನ್ನೆದೆ ಪ್ರೀತಿ ಕೂಸಿಗೆ. ಆದ್ರೆ ನೀನು ನನ್ನಿಂದ ದೂರವಾಗಿ ಹೋಗಿರುವೆ. ನನ್ನೆದೆಯಲ್ಲಿರುವ ಪ್ರೀತಿ ಕೂಸು “ಅಮ್ಮ ಎಲ್ಲಿ?” ಎಂದರೆ ನಾನೇನು ಹೇಳಲಿ? ನಿನ್ನ ಉದರದಲ್ಲಿರುವ ಮಗು “ಅಪ್ಪ ಎಲ್ಲಿ?” ಎಂದರೆ ನೀನೇನು ಹೇಳುವೆ?

೬) ಎದೆಗೆ ವಿರಹದ ಬೆಂಕಿ ಹತ್ತಿದೆ ನಂದಿಸು ಬಾ ಗೆಳತಿ. ನಿನಗಿಷ್ಟವಿಲ್ಲದಿದ್ದರೂ ತೋರಿಕೆಗಾದರೂ ಬಾ ಮನದೊಡತಿ. ನೀನೇ ಹಚ್ಚಿದ ಬೆಂಕಿಯನ್ನು ನೀನೇ ನಂದಿಸು ಬಾ ಗೆಳತಿ…

೭) ಒಂದಿನ ಪೆಟ್ರೋಲಿಯಂ ನಿಂತೊದ್ರೆ,
ಭಾರತ ಹಾಫ್ ಮರ್ಡರ್ ಆಗುತ್ತೆ.
ಒಂದಿನ ಸಾಫ್ಟವೇರ್ ಬಿದ್ದೊದ್ದ್ರೆ,
ಅಮೇರಿಕಾ ಫುಲ್ ಮರ್ಡರ್ ಆಗುತ್ತೆ.
ಆದ್ರೆ ಒಂದ ಕ್ಷಣ ನೀ ನನ್ನಿಂದ ದೂರಾದ್ರೆ,
ನನ್ನ ಉಸಿರು ಕಟ್ಟಿದಂಗಾಗುತ್ತೆ…

೮) ಹೃದಯವೆಂಬ ತೊಟ್ಟಿಲೊಳಗೆ ಪ್ರೀತಿಯೆಂಬ ಹಸಿಗೂಸನ್ನು ಮಲಗಿಸಿ ದ್ವೇಷವೆಂಬ ಜೋಗುಳವನ್ನೇಕೆ ಹಾಡುತ್ತಿರುವೆ? ನಿನ್ನಲ್ಲಿರುವ ಪ್ರೀತಿಯನ್ನು ನೀನೇಕೆ ಸಾಯಿಸುತ್ತಿರುವೆ?

೯) ನನ್ನ ಪ್ರೇಮಗೀತೆಗೆ ಸ್ವರವಾಗಬೇಕಿದ್ದವಳು, ಪ್ರೀತಿ ನಾಟಕವಾಡಿ ನನ್ನ ವಿರಹಗೀತೆಗೆ ಅಪಸ್ವರವಾದಳು. ಆದರೂ ನಾ ಹಾಡೋದನ್ನು ನಿಲ್ಲಿಸಲಿಲ್ಲ. ನನ್ನ ಕಡೆ ಉಸಿರಿರೋ ತನಕ ನಾನು ಅವಳಿಗಾಗಿ ಹಾಡುವೆನು…

೧೦) ಮನಸ್ಸಿನಿಂದ ಮರೆಯಾಗಿ ಹೋದವಳನ್ನು ಬೇಡವೆಂದರು ನೆನೆಯುತ್ತಿದೆ ಈ ಮನಸು.

ಬೇಡವೆಂದರೂ ಬೀಳುತ್ತಿವೆ ಹಗಲುಗನಸು. ನನ್ನ ಹೃದಯದ ಸಂಗಾತಿಯೇ ನೀ ಎಲ್ಲಿರುವೆ ಎಂಬುದನ್ನು ಹೇಳಿ ಉಪಕರಿಸು… ತೋರಬೇಡ ತೋರಿಕೆಯ ಹುಸಿ ಮುನಿಸು. ಇಷ್ಟವಿದ್ದರೆ ನನ್ನನ್ನು ದ್ವೇಷಿಸು. ಆದ್ರೆ ಮತ್ತೆ ಪ್ರೀತಿಸಿ ಸತಾಯಿಸದಿರು…

೧೧) ಕಳೆದು ಹೋಗಿರುವೆ ನಾ ಅವಳ ಮಡಿದ ಕನಸುಗಳ ಲೋಕದೊಳಗೆ. ದಾರಿ ತೋರಬೇಕಾದವಳೆ ತಾನು ದಾರಿ ತಪ್ಪುವುದಲ್ಲದೆ ನನ್ನನ್ನು ದಾರಿ ತಪ್ಪಿಸಿದ್ದಾಳೆ…

೧೨) ಕಣ್ಣಿಗೂ, ಕಣ್ಣೀರಿಗೂ
ಕದನವು ಶುರುವಾಗಿದೆ.
ಮನಸಿಗೂ ಕನಸಿಗೂ
ವಿರಹವು ಕಾಡಿದೆ…

೧೩) ಬಲಗಾಲಿಟ್ಟು ನನ್ನೆದೆಯೊಳಗೆ ಬಂದವಳು, ಎಡಗಾಲಿಟ್ಟು ಹೊರ ನಡೆಯುವಾಗ ಅವಸರಪಟ್ಟು ಎಡವಿ ಬಿದ್ದಳು…

೧೪) ಪ್ರೀತಿ ಎಂಬ ಮಗುವನ್ನು ಹುಟ್ಟಿಸಿ ಕೊಂದ ಕ್ರೂರಿ ಅವಳು…

೧೫) ಪ್ರೀತಿ ಬತ್ತಿ ಹೋದ
ಮೇಲೆ ಪ್ರೇಯಸಿಯ ನೆನಪೇಕೆ?
ಗೆದ್ದು ಸೋತ ಮೇಲೆ
ಮತ್ತೆ ಸೋಲುವ ಆಸೆಯೇಕೆ?

೧೬) ಕನಸು ಕರಗಿ ಕಂಬನಿಯಾಗಿದೆ
ಅವಳ ನೆನಪು ನಂಜಾಗಿದೆ…

೧೭) ಮನಸ್ಸಲ್ಲಿನ ಪ್ರೀತಿ ನೋವು
ತರುತ್ತಿದೆ ಸಾವು…

೧೮) ಖಾಲಿ ಜೀವನ
ಪೋಲಿ ಯೌವ್ವನ
ಯಾರಿಗೇಳಲಿ ನನ್ನ ಪ್ರೇಮಕವನ?

೧೯) ಕಣ್ಣೀರಲ್ಲಿ ಅವಳ ಮಹಾಮೌನ
ತಣ್ಣೀರಲ್ಲಿ ನನ್ನೆದೆಯ ಸ್ನಾನ
ಒದ್ದೆಯಾಯ್ತು ಪ್ರೇಮ ಕವನ
ದಾರಿ ತಪ್ಪಿದೆ ಪ್ರೀತಿಯ ಪಯಣ
ಕಳೆದೋಗುತ್ತಿದೆ ಯೌವ್ವನ
ಇದ್ದನ್ನೆಲ್ಲ ಯಾರಿಗೇಳಿ ಸಾಯೋಣಾ? ಸುಸ್ತಾದ ಅನುಭವಸ್ಥರು ಸ್ವಲ್ಪ ಹೇಳ್ರಣ್ಣಾ?

೨೦) ಹೃದಯವು ಖಾಲಿಖಾಲಿ
ಜೀವನವು ಖಾಲಿಖಾಲಿ
ಎಕ್ಸಾಮಲ್ಲಿ ಆ್ಯನ್ಸರ್ ಶೀಟು ಖಾಲಿಖಾಲಿ
ನಾನ್ಯಾಕಾದೆ ಇಷ್ಟೊಂದು ಪೋಲಿ?

೨೧) ಎಷ್ಟಂತ ನೆನೆಯಲಿ ನಿನ್ನ
ಕಣ್ಣೀರು ಬತ್ತೊಗೋ ಮುನ್ನ.
ಬೇಗನೆ ಹೇಳಿಬಿಡು ಚಿನ್ನ
ನಾ ನಿನ್ನಲ್ಲೇ ಮರೆಯಾಗೋ ಮುನ್ನ..

೨೨) ಪ್ರೀತಿಗಾಗಿ ಹೂವಾ ಕೊಟ್ಟೆ
ಹೂವಿನಲ್ಲಿ ಹೃದಯ ಇಟ್ಟೆ
ಆ ಹೃದಯದಲ್ಲಿ ಜೀವಾ ಬಿಟ್ಟೆ
ನಿನ್ನಿಂದೆ ಅಲೆದು ನಾ ತುಂಬಾ ಕೆಟ್ಟೆ
ಆದ್ರೂ ನಾ ನಿನ್ನ ಹೊಗಳುವೆ ಕಟ್ಟಿ ಕವನಗಳ ಕೋಟೆ…

೨೩) ನೀ ನಿರ್ಮಿಸಿದ ಮಸಣದ ಮನೆ
ನನ್ನೆದೆಯ ಒಂಟಿ ಕೋಣೆ…

೨೪) ಕಂಗಳ ನಡುವೆ
ಕನಸುಗಳ ಸೇತುವೆ
ಕೇಳದೇನೆ ಯಾಕೆ ಕಟ್ಟಿದೆ ಹೇಳು ನೀ ಚೆಲುವೆ..??

೨೫) ಕೊನೆಯಿರದ ಕಣ್ಣೀರ ಹನಿಗಳಿಂದ ಕನಸಿನ ಅರಮನೆಯನ್ನು ಕಟ್ಟಲೆ? ಮೌನವಾದ ಮಾತುಗಳಿಂದ ಮುರಿದ ಹೃದಯಗಳಿಗೆ ಮಹಾಸೇತುವೆ ಕಟ್ಟಲೇ? ಇಲ್ಲ ಮುಳುಗುತ್ತಿರುವ ಬಾಳದೋಣಿಗೆ ಮತ್ತೆರಡು ರಂಧ್ರಗಳನ್ನು ಕೊರೆಯಲೆ?

2) ಸತ್ತ ಕವಿತೆಗಳ ಮಸಣದಲ್ಲಿ : Kannada Love Poem

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಕನಸ್ಸಲ್ಲು ನನಸ್ಸಲ್ಲು ಅವಳ್ದೆ ಧ್ಯಾನ
ಈ ಮನಸಿಗಿಲ್ಲ ಒಂಚೂರು ಸಮಾಧಾನ…
ಅವಳಿಗೆ ಮೈತುಂಬ ಬಿಗುಮಾನ
ಅವಳಿಲ್ದೆ ಹೇಗೆ ನನ್ನ ಜೀವನ…?

ಎಷ್ಟಂತ ಬರೆಯಲಿ
ಅವಳ ಮೇಲೆನೆ ಹನಿಗವನ…?
ಅವಳೇ ಒಲಿಯದಿದ್ದ್ರೆ
ಆಗೋದ್ಯಾಗೆ ನನ್ನ ಪ್ರೀತಿ ಪಾವನ…?

ಇರೋ ಪ್ರೀತಿನ್ಯಾಕೆ ಮರೆಮಾಚ್ತಿದೆ
ಆಕೆಯ ತುಂಟ ನಯನ?
ಉತ್ತರಿಸಲಾಗದ ಪ್ರಶ್ನೆಗಳನ್ನೇ
ಕೇಳೊದ್ಯಾಕೆ ನನ್ನೀ ಹುಚ್ಚು ಮನ?

ಆಕೆಯ ಉತ್ತರಕ್ಕಾಗಿ ಕಾದು
ಕಳೆದೋಯ್ತು ನನ್ನ ಯೌವ್ವನ…
ಆಕೆ ಖುಷಿಯಿಂದಲೇ ಬರೆದಳಾ
ಮನೆಮದ್ವೆಗೆ ಮೌನ ಚರಣ…?

ಆಕೆ ನನಗೆ ಪ್ರಶ್ನೆಯಾಗೆ ಉಳಿದು
ಪ್ರಾರಂಭಿಸಿದಳು ಹೊಸ ಜೀವನ…
ಅವಳ ವಿರಹ ವೇದನೆಯಲ್ಲೇ
ನಾ ಸೇರಿದೆ ಸತ್ತ ಕವಿತೆಗಳ ಮಸಣ…

3) ಒಂದು ನಿರಾಸೆ… ಒಂದು ವಿರಹ ಕಾವ್ಯ : Kannada sad Love Poem – Sad Love Kavana – Viraha Kavana

ನನಗೆ ಕಾರಣವಿಲ್ಲದೆ ವಿರಹದ ಕಣ್ಣೀರನ್ನು ಕರುಣಿಸಿ ಕಣ್ಮರೆಯಾದವಳನ್ನು ಕಣ್ತುಂಬ ನೋಡೋವಾಸೆ. ಆದ್ರೆ ಆಕೆಯ ಕಣ್ಣ ಕಾಡಿಗೆ ನನ್ನ ನೋಡಿ ಕೀಚಾಯಿಸಿ ಕಾಡುತ್ತಿದೆ…

ನನ್ನ ಲೈಫ್ನಾ ಬರಿಬಾದ ಮಾಡಿದವಳನ್ನು ಬಾಯ್ತುಂಬ ಹಾಡಿ ಹೊಗಳುವಾಸೆ. ಆದ್ರೆ ಆಕೆಯ ಕೆಂದುಟಿಯ ಕೆಂಪು ನನ್ನ ನಾಲಿಗೆನಾ ಕಟ್ಟಿ ಹಾಕುತ್ತಿದೆ…

ನನ್ನ ಕಿವಿಗಳಿಗೆ ಬರೀ ನನ್ನ ನಿಂದನೆಗಳನ್ನೇ ಕೇಳುವಂಥೆ ಮಾಡಿದವಳಿಗೆ ಕಿವಿಯಲ್ಲಿ ಗುಟ್ಟಾಗಿ ಏನೋ ಹೇಳೊವಾಸೆ. ಆದ್ರೆ ಅವಳ ಕಿವಿಯೋಲೆ ನನ್ನ ಕೆಣಕಿ ಕೇಕೆ ಹಾಕುತ್ತಿದೆ…

ನನ್ನ ಮಂದಹಾಸವನ್ನು ಕಿತ್ತುಕೊಂಡವಳನ್ನು ಮುತ್ತು ನೀಡಿ ಮುದ್ದಾಡುವಾಸೆ. ಆದ್ರೆ ಅವಳ ಮೂಗಿನ ಮೂಗುತಿ ನನ್ನ ಅಪಹಾಸ್ಯ ಮಾಡಿ ನಗುತ್ತಿದೆ…

ಅವಳ ಕಂಗಳ ಕಿಟಕಿಯಲ್ಲಿ ನನ್ನ ಪ್ರೀತಿಯಾಳವನ್ನು ಇಣುಕಿ ಇಣುಕಿ ನೋಡುವಾಸೆ. ಆದರೆ ಅವಳ ಕಣ್ಣೋಟ ನನ್ನನ್ನು ಕೋಪಕಾರಿ ಕೊಲ್ಲುತ್ತಿದೆ…

ಅವಳ ಮುದುಡಿದ ಮುಖದಲ್ಲಿ ನನಗಾಗಿ ಅರಳಿದ ನಗುವನ್ನು ಮತ್ತೊಮ್ಮೆ ನೋಡುವಾಸೆ.

ಆದರೆ ಅವಳ ಮುಗುಳ್ನಗೆ ನನ್ನ ಮನಸ್ಸಿಗೆ ಮುಳ್ಳಾಗಿ ಚುಚ್ಚುತ್ತಿದೆ…

ಮಳೆ ಸುರಿಯುವಾಗ ಆಕಾಶಕ್ಕೆ ಕೊಡೆ ಹಿಡಿಯುವಾಸೆ. ಚಳಿಯಾದಾಗ ಭೂಮಿಗೆ ಕಂಬಳಿ ಹೊದಿಸುವಾಸೆ. ಸುಡೋ ಸೂರ್ಯನಿಗೆ ಸಾರಾಯಿ ಕುಡಿಸುವಾಸೆ. ಚಂದ್ರನಿಗೆ ಚಾಕಲೇಟ ತಿನ್ನಿಸುವಾಸೆ. ಕೊನೆಯದಾಗಿ ಕಣ್ಮುಚ್ಚುವ ಮುನ್ನ ಅವಳನ್ನು ಕಣ್ತುಂಬ ನೋಡುವಾಸೆ. ಆದರೆ ಅವಳ ದುರಾಸೆಯಿಂದಾಗಿ ಎಲ್ಲವೂ ಬರೀ ನಿರಾಸೆ…

4) ಪ್ರೀತಿ ಇಲ್ಲದ ಮೇಲೆ : Kannada Sad Love Poem – Kannada Prema Kavanagalu

ಪ್ರೀತಿ ಇಲ್ಲದ ಮೇಲೆ ಸಿಕ್ಕಸಿಕ್ಕಲೆಲ್ಲ ಸುಮಸುಮ್ನೆ ಸ್ಮೈಲ್ ಯಾಕೆ ಕೊಟ್ಟೆ…?

ಪ್ರೀತಿ ಇಲ್ಲದ ಮೇಲೆ ಕೇಳದೇನೆ ಮೊಬೈಲ್ ನಂಬರ್ ಯಾಕೆ ಕೊಟ್ಟೆ…?

ಪ್ರೀತಿ ಇಲ್ಲದ ಮೇಲೆ ಮಧ್ಯರಾತ್ರಿ ಮಿಸಕಾಲ್ ಯಾಕೆ ಕೊಟ್ಟೆ…?

ಪ್ರೀತಿ ಇಲ್ಲದ ಮೇಲೆ ಮೊಬೈಲ್ನಲ್ಲಿ ಗಂಟೆಗಟ್ಟಲೆ ಯಾಕೆ ಮಾತನಾಡಿದೆ…?

ಪ್ರೀತಿ ಇಲ್ಲದ ಮೇಲೆ ಹಗಲುರಾತ್ರಿ ಚಾಟಿಂಗ್ ಯಾಕೆ ಮಾಡಿದೆ…?

ಪ್ರೀತಿ ಇಲ್ಲದ ಮೇಲೆ ಸಾವಿರಾರು ಪ್ರೇಮ ಸಂದೇಶಗಳನ್ನು ಯಾಕೆ ಕಳಿಸಿದೆ…?

ಪ್ರೀತಿ ಇಲ್ಲದ ಮೇಲೆ ನನ್ನೊಂದಿಗೆ ಕೈಕೈಹಿಡಿದು ಕದ್ದುಮುಚ್ಚಿ ಊರೆಲ್ಲ ಯಾಕೆ ಸುತ್ತಾಡಿದೆ…?

ಪ್ರೀತಿ ಇಲ್ಲದ ಮೇಲೆ ನನ್ನನ್ನು ನಿನ್ನ ಮಡಿಲಲ್ಲಿ ಮಲಗಿಸಿಕೊಂಡು ಮುದ್ದಾಡಿ ಮುತ್ತುಗಳನ್ನು ಯಾಕೆ ಕೊಟ್ಟೆ…?

ಪ್ರೀತಿ ಇಲ್ಲದ ಮೇಲೆ ನನಗೆ ಕಾಸ್ಟ್ಲಿ ಗಿಫ್ಟಗಳನ್ನು ಯಾಕೆ ಕೊಟ್ಟೆ…?

ಪ್ರೀತಿ ಇಲ್ಲದ ಮೇಲೆ ಸೆಲ್ಫಿ ನೆಪದಲ್ಲಿ ನನ್ನನ್ನು ನಿನ್ನತ್ರ ಯಾಕೆ ಸೆಳೆದುಕೊಂಡೆ…?

ಪ್ರೀತಿ ಇಲ್ಲದ ಮೇಲೆ ನನ್ನ ಜೊತೆ ಯಾಕೆ ಪೆದ್ದುಪೆದ್ದಾಗಿ ಆಡಿ ಮುದ್ದು ಮಾಡಿದೆ…?

ಪ್ರೀತಿ ಇಲ್ಲದ ಮೇಲೆ ನನ್ನ ನೋವು ನಲಿವುಗಳಿಗೆ ಯಾಕೆ ಕಷ್ಟಪಟ್ಟೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನನ್ನ ಹೆಸರನ್ನು ನಿನ್ನ ಕೈಮೇಲೆ ಹಚ್ಚೆ ಹಾಕಿಸಿಕೊಂಡೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ಮದುವೆಗೂ ಮುಂಚೆಯೇ ನನ್ನೊಂದಿಗೆ ಹನಿಮೂನಿಗಾಗಿ ಕಿತ್ತಾಡಿದೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನಿನ್ನ ಮನೆಯವರ ಕಣ್ತಪ್ಪಿಸಿ ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಿದೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನನ್ನ ಪ್ರೀತಿಸಿ ವಂಚಿಸಿದೆ…?

ಪ್ರೀತಿ ಇಲ್ಲದ ಮೇಲೆ ಗಂಡನ ಮನೆಗೆ ಹೋಗುವಾಗ ಯಾಕೆ ಕಣ್ಣೀರಾಕಿದೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ನೀ ಮದುವೆಯಾದರೂ ನನಗಿನ್ನೂ ಮೆಸೇಜ್ ಮಾಡುತ್ತಿರುವೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ನೀನಿನ್ನೂ ನನ್ನ ನೆನಪಲ್ಲಿ ಇಟ್ಟುಕೊಂಡಿರುವೆ…?

ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನನ್ನ ನೆನೆಸಿಕೊಂಡು ಕಣ್ಣಿರಾಕಿ ಕೊರಗುತ್ತಿರುವೆ…?

ಕ್ಷಮಿಸಿ ಬಿಡು ಗೆಳತಿ,,, ನಾನೀಗ ನಿನ್ನವನಲ್ಲ… ನಿನ್ನವನಾಗಲು ಸಾಧ್ಯವೂ ಇಲ್ಲ…

5) ನನ್ನವಳು : Romantic Love Poem in Kannada – Kannada Love Kavan

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ನನ್ನವಳು ಸುಂದರಿನೇ, ಆದ್ರೆ ವಿಶ್ವಸುಂದರಿಯಲ್ಲ. ನನ್ನವಳು ಸ್ವಲ್ಪ ಅಹಂಕಾರಿನೇ, ಆದ್ರೆ ಶೂರ್ಪನಖಿಯಂಥ ದುರಂಹಕಾರಿಯಲ್ಲ. ನನ್ನವಳು ಸ್ವಲ್ಪ ಕೋಪಿಷ್ಟೇನೇ, ಆದ್ರೆ ಕೊಲೆಗಾರ್ತಿಯಲ್ಲ…

ಮನಸ್ಸಲ್ಲಿ ನೂರಾರು ನೋವುಗಳು ನರ್ತಿಸುವಾಗ ನಗುವುದನ್ನು ಕಲಿಸಿದಳು ನನ್ನವಳು… ಹೆಜ್ಜೆಹೆಜ್ಜೆಗೂ ಹರ್ಟಾದರೂ ಹೆದರದೆ ಹೆಜ್ಜೆ ಇಡುವುದನ್ನು ಕಲಿಸಿದವಳು ನನ್ನವಳು… “ಸಹನೆ ನಿನ್ನದಾದರೆ ಸಕಲವು ನಿನ್ನದು, ವಿನಯವು ನಿನ್ನದಾದರೆ ವಿಜಯವು ನಿನ್ನದು” ಎಂದು ಉಪದೇಶಿಸಿದವಳು ನನ್ನವಳು…

ನನ್ನವಳು ಮೈಗೆ ಔಷಧಿ ಕೊಡೋ ಡಾಕ್ಟ್ರಲ್ಲ, ಮನಸಿಗೆ ಔಷಧಿ ಕೊಡೋ ಡಾಕ್ಟರ್ ಅವಳು. ನನ್ನವಳು ಮನೆ ಕಟ್ಟೋ ಇಂಜಿನಿಯರ್ ಅಲ್ಲ, ಮನಸ್ಸು ಕಟ್ಟೋ ಇಂಜಿನಿಯರ್ ಅವಳು…

ನನ್ನವಳು ಗಾಳಿಸುದ್ದಿಗಳ ಗಾಳಿಪಟಗಳಿಗೆ ಬೆಲೆ ಕೊಡಲ್ಲ. ಅದೃಷ್ಟಕ್ಕಿಂತ ಆತ್ಮವಿಶ್ವಾಸಕ್ಕೆ ಜಾಸ್ತಿ ಬೆಲೆ ಕೊಡುವವಳು ನನ್ನವಳು… ನಾನು ಕಹಿ ಬೇವಾದರೆ, ಸಿಹಿ ಬೆಲ್ಲ ನನ್ನವಳು…

ಕಾರಣವಿಲ್ಲದೆ ನನ್ನನ್ನು ಸತಾಯಿಸುವುದು, ರೇಗಿಸುವುದು, ಕೆಣಕುವುದು, ಕಾಯಿಸುವುದು, ಅವಳಲ್ಲಿನ ಕೆಲವು ಕೆಟ್ಟ ಗುಣಗಳು. ಆದರೆ ಕಾಯಿಸಿದ ತಪ್ಪಿಗೆ ಕೆನ್ನೆಗೆರಡು ಮುತ್ತು ಕೊಟ್ಟು ಸಂತೈಸುವ ಸುಗುಣೆ ನನ್ನವಳು….

ನೀರು ಎಷ್ಟೇ ಬಿಸಿಯಾಗಿ ಕುದಿಯುತ್ತಿದ್ದರೂ, ಅದು ಬೆಂಕಿಯನ್ನು ಆರಿಸಬಲ್ಲದು. ಅದೇ ರೀತಿ ನನ್ನವಳು ನನ್ನ ಮೇಲೆ ಎಷ್ಟೇ ಕೋಪಿಸಿಕೊಂಡರೂ ಕೊನೆಗೆ ನನ್ನನ್ನು ಕಾಯುವಳು, ಮನ್ನಿಸುವಳು, ಮುದ್ದಿಸುವಳು…

ನನ್ನವಳು ನಕ್ಕರೆ 0°c ಕೂಲೆಸ್ಟ್ ಚಂದ್ರನ ಬೆಳದಿಂಗಳು. ಆದ್ರೆ ಕೋಪಿಸಿಕೊಂಡರೆ 6000°c ಹಾಟೆಸ್ಟ್ ಸೂರ್ಯನ ಕಂಗಳು. ನನ್ನವಳು ಸನಲೈಟೂ ಆಗ್ತಾಳೆ, ಮೂನಲೈಟು ಆಗ್ತಾಳೆ…

ನನ್ನವಳು ನನಗೆ ಶಶಿಕಲಾ, ನಗ್ತಾಳೆ ಕಿಲಕಿಲ, ಕೋಪಿಸಿಕೊಂಡ್ರೆ ರುದ್ರಕಲಾ, ಆಕೆ ಅತ್ರೆ ನನ್ನೆದೆಯಲ್ಲಿ ಕೋಲಾಹಲ, ಆಕೆ ನಗೋದನ್ನ ನೋಡುವುದೇ ನನ್ನ ಹಂಬಲ, ಆಕೆ ಯಾವಾಗ ನಗ್ತಾಳೆ ಯಾವಾಗ ಅಳ್ತಾಳೆ ಎಂಬುದೇ ಒಂದು ದೊಡ್ಡ ಕುತೂಹಲ…

ನನ್ನವಳು ಕೆಲವು ಸಲ ಕಾರಣವಿಲ್ಲದೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಆದರೆ ನಾನು ಉತ್ತರಿಸುವ ಮೊದಲೇ ನಿದ್ರೆಗೆ ಜಾರಿರುತ್ತಾಳೆ. ಕನಸುಗಳ ಸವಾರಿ ಮಾಡಿ ದಿನಾ ನನಗಾಗಿ ಡ್ರೀಮಲ್ಯಾಂಡಲ್ಲಿ ಹುಚ್ಚಿಯಂತೆ ಕಾಯುತ್ತಾಳೆ. ನಾನು ಬರುವುದು ಸ್ವಲ್ಪ ತಡವಾದರೂ ಕನಸ್ಸಲ್ಲಿ ಬಂದು ಕಾಟ ಕೊಡುತ್ತಾಳೆ…

ನನ್ನವಳು ಬೈದಾಗ ನಾನು ಬೇಜಾರು ಮಾಡಿಕೊಳ್ಳಲ್ಲ. ಯಾಕೆಂದರೆ ಅವಳು ನನ್ನ ಒಳ್ಳೆಯದಕ್ಕೇನೆ ಬೈಯ್ಯುತ್ತಾಳೆ. ಅವಳು ಹೆಚ್ಚಾಗಿ ಇಂಗ್ಲೀಷನಲ್ಲೇ ಮಾತಾಡುತ್ತಾಳೆ. ಆದ್ರೆ ನನಗೆ ಬಯ್ಯೋವಾಗ ಮಾತ್ರ ಅಚ್ಚ ಕನ್ನಡದಲ್ಲಿಯೇ ಬೈಯ್ಯುತ್ತಾಳೆ. ಬಹುಶಃ ನನಗೆ ಅರ್ಥ ಆಗಲಿ ಅಂತಾ ಅಚ್ಚ ಕನ್ನಡದಲ್ಲಿ ಬೈಯ್ತಾಳೆ ಎಂದುಕೊಂಡಿದ್ದೆ. ಆದರೆ ಅವಳಿಗೆ ಇಂಗ್ಲೀಷ್ ಬೈಗುಳಗಳು ಬರೋದಿಲ್ಲ…

ನನ್ನವಳ ಸವಿವಾಣಿಯಲ್ಲಿ ಮೋಹಿನಿಯ ನೆರಳಿದೆ. ಅವಳ ಕಂಗಳಲ್ಲಿ ಕಾಮಿನಿಯ ಕಲೆಯಿದೆ. ನನ್ನವಳು ಇಂಗ್ಲೀಷನಲ್ಲಿ ಎಷ್ಟೇ ಮಾತನಾಡಿದರೂ, ಅವಳು ರಾತ್ರಿ ಕನಸು ಕಾಣುವುದು ಕನ್ನಡದಲ್ಲೇ…

ನನ್ನವಳಿಗೆ ನನ್ನ ಮೇಲಾಗಲಿ, ನನ್ನ ಪ್ರೀತಿ ಮೇಲಾಗಲಿ ಎಳ್ಳಷ್ಟೂ ಅನುಮಾನವಿಲ್ಲ. ಆದರೆ ಅವಳಿಗೆ ನಾನು ಕೃಷ್ಣನ ಜಾತಕದಲ್ಲಿ ಹುಟ್ಟಿದೀನಿ ಅನ್ನೋ ಅನುಮಾನವಿದೆ. ಯಾಕಂದ್ರೆ ಎಲ್ಲೋದ್ರು ನನಗೆ ಗೋಪಿಕೆಯರ ಕಾಟ ತಪ್ಪಿದಲ್ಲ ಎಂಬುದು ಗೊತ್ತು ಅವಳಿಗೆ…

ನನ್ನವಳು ದೇವರನ್ನು ಭಕ್ತಿಯಿಂದ ಪೂಜಿಸುತ್ತಾಳೆ, ಭಯದಿಂದಲ್ಲ. ಗುರುವನ್ನು ವಿನಯದಿಂದ ಗೌರವಿಸುತ್ತಾಳೆ, ವಿವೇಕದಿಂದಲ್ಲ. ನನ್ನನ್ನು ಸ್ನೇಹದಿಂದ ಪ್ರೀತಿಸುತ್ತಾಳೆ, ಮೋಹದಿಂದಲ್ಲ…

ನನ್ನವಳು ಒಂಥರಾ ಲಹರಿ ಮಹ್ಮದ ಇದ್ದಂಗೆ. ಅವಳು ಅವಳ ಲೋಕದಲ್ಲೇ ಕಳೆದು ಹೋಗಿರುತ್ತಾಳೆ. ರೋಮ್ಯಾನ್ಸಗೂ, ಸೆಕ್ಸಗೂ ಇರುವ ವ್ಯತ್ಯಾಸ ಚೆನ್ನಾಗಿ ಗೊತ್ತು ಅವಳಿಗೆ. ಸೆಕ್ಸಗಾಗಿ ರೋಮ್ಯಾನ್ಸನ್ನು ದುರುಪಯೋಗ ಮಾಡಿಕೊಳ್ಳುವಷ್ಟು ಸಮಯ ಸಾಧಕಿಯಲ್ಲ ನನ್ನವಳು…

ನನ್ನವಳಿಗೆ ನನಗಿಂತ ಜಾಸ್ತಿ ಬುದ್ಧಿಯಿದ್ದರೂ ಪೆದ್ದಿಯಂತಾಡುವಳು. ನಾನು ಬೇಡ ಅನ್ನೋದನ್ನೇ ಬೇಕು ಅಂತಾ ಮಾಡೋ ತುಂಟಿ ನನ್ನವಳು… ಸದಾ ಮುಗುಳ್ನಗು ಮತ್ತು ನಾಚಿಕೆ ನನ್ನವಳ ಆಭರಣಗಳು…

ನನ್ನವಳು “ನೀನು ಪೆನ್ ಹಿಡಿದು ರೈಟರ್ ಆಗೋದೇನ ಬೇಡ, ಗನ್ ಹಿಡಿದು ಕಿಲ್ಲರ್ ಆಗೋದು ಬೇಡ, ರೋಸ್ ಹಿಡಿದು ಲವ್ವರ್ ಆಗು ಸಾಕು” ಎಂದು ದಿನಾ ನನ್ನ ಕಾಡುವಳು. ಜೊತೆಗೆ “ಕರೆಂಟ ಇದ್ರು ಕ್ಯಾಂಡಲ್ ಹಚ್ಚಿ ಓದು ವಿಶ್ವೇಶ್ವರಯ್ಯ ಆದ್ರು ಆಗಬಹುದು. ಆದ್ರೆ ನೀನು ನನ್ನಷ್ಟು ಬ್ರಿಲಿಯಂಟ ಆಗಲ್ಲ” ಎಂದು ರೇಗಿಸುವಳು…

ನಾನು ಪೆದ್ದನಂತೆ ಆಡತೊಡಗಿದಾಗ ನನ್ನನ್ನು ಮುದ್ದು ಮಾಡಿ “ಬುದ್ಧನಿಗೆ ಬೋಧಿ ಮರದ ಕೆಳಗೆ ಜ್ಞಾನೋದಯವಾಯಿತು. ಸಿದ್ಧನಿಗೆ ಸುಡುಗಾಡಲ್ಲಿ ಜ್ಞಾನೋದಯವಾಯಿತು. ಇನ್ನೂ ನಿನಗೆ ಎಲ್ಲಿ? ಯಾವಾಗ ಜ್ಞಾನೋದಯವಾಗುತ್ತೋ ಯಾವಳಿಗೊತ್ತು? ಎಂದು ನನ್ನವಳು ವ್ಯಥಿಸುವಳು…

ನನ್ನಲ್ಲಿ ಅವಗುಣಗಳು ಅಧಿಕವಾದಾಗ ನನ್ನನ್ನು “ಪಾಂಡವರ ಮನೆಯಲ್ಲಿ ಹುಟ್ಟಿದ ಕೌರವ ನೀನು” ಎಂದು ಕೀಚಾಯಿಸುವಳು. “ನೀನು ಕಾಳಿದಾಸನಾಗಬೇಡ, ಕಿರಾತಕನಾಗಬೇಡ, ನನ್ನ ಪ್ರೀತಿಯಲ್ಲಿ ಪ್ರೇಮದಾಸನಾಗು ಸಾಕು” ಎಂದು ಸಲಹೆ ಕೊಡುವವಳು ನನ್ನವಳು…

ನನ್ನವಳು “ನೀನು ಕೃಷ್ಣನೇ, ಆದ್ರೆ ಕಳ್ಳ ಕೃಷ್ಣನಲ್ಲ. ಬೆಣ್ಣೆ ಕದಿಯೋ ಅವಶ್ಯಕತೆ ನಿನಗಿಲ್ಲ. ನಾರಿಯ ಸೀರೆ ಸೆಳೆಯೋವಷ್ಟು ಪೋಲಿ ನೀನಲ್ಲ. ಆದರೆ ನೀ ನನ್ನ ಮನಸ್ಯಾಕೆ ಕದ್ದೆ?” ಎಂದು ಪದೇಪದೇ ಕೇಳುವಳು…

ನನ್ನವಳು ನನಗಾಗಿ ತಪಸ್ಸು ಮಾಡಲು ಸಹ ತಯಾರಿರುವಳು. ಅವಳ ಹೆಸರಿನ ಮುಂದೆ ನನ್ನ ಹೆಸರನ್ನು ಸೇರಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವಳು… “ನನ್ನ ಕತ್ತಿಗೆ ತಾಳಿ ಕಟ್ಟೋದ ಬಿಟ್ಟು, ಬೇಡದ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಚಿಂತೆ ಯಾಕ ಮಾಡ್ತೀಯಾ?” ಅನ್ನುವಳು… ಅವಳೇ ನನ್ನವಳು, ನನ್ನ ಉಸಿರವಳು…

6) ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ – Love Kavana – Kannada Feeling Kavanagalu

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಅವತ್ತು ನನ್ನ ಕಾಲಲ್ಲಿ ಮುಳ್ಳು ಚುಚ್ಚಿದಾಗ ನಿನ್ನ ಕಣ್ಣಂಚಲ್ಲಿ ಕಣ್ಣೀರು ಇಣುಕಿ ನೋಡಿತ್ತು. ಆದರೆ ಇವತ್ತು ನನ್ನೆದೆಗೆ ಮುಳ್ಳು ಚುಚ್ಚಿದರೂ ನೀನೇಕೆ ಮೌನವಾಗಿರುವೆ?

ಅವತ್ತು ನಾನು ಕಣ್ಣಲ್ಲಿ ಕಸ ಬಿದ್ದವರಂತೆ ನಾಟಕವಾಡುವಾಗ ಸಿಕ್ಕಾಪಟ್ಟೆ ಕೇರ್ ತೆಗೆದುಕೊಂಡ ನೀನು, ಇವತ್ತು ನಾನು ನಿಜವಾಗಿಯೂ ಅಳೋವಾಗ ಕಲ್ಲಾಗಿ ಕುಳಿತಿರುವೆ ಏಕೆ?

ನಿನ್ನ ನೋಡಿದಾಗಲೇ ಕಣ್ಣಿಗೌತಣ
ನಿನ್ನ ಪ್ರೀತಿಸಿದಾಗಲೇ ಈ ಮನಸ್ಸಿಗೆ ಸಮಾಧಾನ.
ಕಂಗಳಿದ್ದು ಏನು ಫಲ ನಿನ್ನ ನೋಡದೆ?
ಕೈಗಳಿದ್ದು ಏನು ಫಲ ನಿನ್ನ ಮುದ್ದಾಡದೆ?

ನೀರಲ್ಲಿ ಬಿದ್ದು ಸಾಯುವ ಇರುವೆಯನ್ನು ಬದುಕಿಸುವ ವಿಶಾಲ ಹೃದಯಿ ನೀನು. ಆದ್ರೆ ನಿನ್ನ ಪ್ರೀತಿಯಲ್ಲಿ ಬಿದ್ದ ಹೃದಯವನ್ನು ಸತಾಯಿಸಿ ಸಾಯಿಸುತ್ತಿರುವೆ ಯಾಕೀನ್ನು?

ನಿನ್ನೊಂದಿಗೆ ಜಡಿಮಳೆಯಲ್ಲಿ ನೆನೆಯುವಾಗ,
ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ,
ಬೀದಿಯಲ್ಲಿ ಕೈಕೈಹಿಡಿದು ನಡೆಯುವಾಗ,
ಪದೇಪದೇ ಕಾರಣವಿಲ್ಲದೆ ಕಿತ್ತಾಡುವಾಗ
ಗೊತ್ತಾಗದ ಪ್ರೀತಿ, ನೀನು ದೂರಾದ ಮೇಲೇಕೆ ಗೊತ್ತಾಗಿ ನನ್ನ ಕಾಡುತ್ತಿದೆ?

ನನಗ್ಯಾಕೋ ಸಂದೇಹ, ನೀನು ನಿಜವಾಗಿಯೂ ಹೃದಯಿಯೆಂದು. ನಿನ್ನ ನೆನಪಲ್ಲಿ ಕೊರಗಿ ಕೊರಗಿ ನನ್ನ ಆನೆದೇಹ ಕರಗಿತು. ಆದರೆ ನಿನ್ನ ಪುಟ್ಟ ಹೃದಯ ಕರಗಲಿಲ್ಲವಲ್ಲ?

ನಾನು ನನ್ನೆದೆಯಲ್ಲೊಂದು ಪುಟ್ಟ ಗುಡಿ ಕಟ್ಟಿ ಅಲ್ಲಿ ನಿನ್ನನ್ನು ದೇವತೆಯಾಗಿ ಪೂಜಿಸುತ್ತಿಲ್ಲ. ನಿನ್ನನ್ನು ನಾನು ನನ್ನೆದೆಯ ಗುಡಿಸಲಲ್ಲಿ ರಾಣಿಯಾಗಿ ಘೋಷಿಸಿ ಪ್ರೀತಿಸುತ್ತಿರುವೆ. ಹೀಗಿರುವಾಗ ನಿನ್ನ ಹೃದಯದಲ್ಲಿ ಪ್ರೀತಿ ಸಿಂಹಾಸನವನ್ನು ನೀಡದಿದ್ದರೂ ಪರವಾಗಿಲ್ಲ. ಕೊನೆಗೆ ನಿನ್ನ ಹೃದಯದ ಯಾವುದೋ ಒಂದು ಮೂಲೆಯಲ್ಲಿ ವಿಶ್ರಮಿಸಲು ಆರಡಿ-ಮೂರಡಿ ಜಾಗವನ್ನು ಸಹ ನೀಡದಷ್ಟು ಕ್ರೂರಿಯೇ ನೀನು?

ನೀ ನನ್ನ ಮೇಲೆ ಕೋಪಿಸಿಕೊಂಡು ಕೋಪಾಸ್ತ್ರದಿಂದ ನನ್ನ ಕೊಲ್ಲುವ ಬದಲು, ನಿನ್ನ ಚೆಂದುಟಿಯ ಬಿಲ್ಲಿನಿಂದ ಒಂದು ನಗುವಿನ ಹೂಬಾಣವನ್ನು ಬಿಟ್ಟು ನನ್ನನ್ನು ಸಂತೋಷದಿಂದ ಕೊಲ್ಲಬಹುದಿತ್ತಲ್ಲ?

ನಾನು ನೋವುಗಳಿದ್ದರೂ ನನ್ನ ಪಾಡಿಗೆ ನಗುನಗುತ್ತಾ ಆರಾಮಾಗಿದ್ದೆ. ನೀನು ನನ್ನ ಬಾಳಿಗೆ ಬೆಳಕಾಗಿ ಬಂದು ಹೋಗುವಾಗ ನೋವನ್ನು ನೀಡಿ ಹೋದೆ. ಒಂಟಿ ಯೌವ್ವನದಲ್ಲಿ ಬಂದು ಹೋಗುವ ಪೋಲಿ ಕವನವಾದೆ ಏಕೆ ನೀನು?

ನನ್ನ ತಪ್ಪುಗಳನ್ನು ನಾ ತಿದ್ದಿಕೊಂಡು ಬದಲಾದರೂ, ನಿನಗ್ಯಾಕೆ ನಿನ್ನ ತಪ್ಪಿನ್ನು ಅರ್ಥವಾಗ್ತೀಲ್ಲ? ನೀನಿಲ್ಲದೆ ನಾನು ಬದುಕಬಲ್ಲೆ. ಆದರೆ ಸಂತೋಷವಾಗಿರಲಾರೆ. ನಾನಿಲ್ಲದೆ ನೀನು ಸಂತೋಷವಾಗಿರಬಲ್ಲೆಯಾ? ಗೆಳತಿ ಹೇಳಿ ಹೋಗು ಕಾರಣ. ಕೊಲ್ಲದಿರು ವಿನಾಕಾರಣ…

7) ನನ್ನ ಪ್ರೇಯಸಿ : ಪ್ರೇಮ ಕಾವ್ಯ Love Kavana – Kannada Love Kavanagalu – My Lover Poetry in Kannada

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ನನ್ನ ಪ್ರೇಯಸಿ ಮಿಸ್ ವಲ್ಡ್ ಅಲ್ಲ.
ಅವಳು ಮಿಸ್ ಇಂಡಿಯಾ ಸಹ ಅಲ್ಲ.
ಅವಳು ಮಿಸ್ ಕರ್ನಾಟಕ ಕೂಡ ಅಲ್ಲ.
ಅವಳು ಬರೀ ಮಿಸ್ ಹಾರ್ಟ್…

ಅವಳು ಹೃದಯದಿಂದ ಮಾತ್ರ ಶ್ರೀಮಂತಳು
ಅವಳು ಬರೀ ಹೃದಯದಿಂದ ಸುಂದರಳು.
ಅದಕ್ಕೆ ಅವಳು ನನ್ನ ಸ್ವೀಟಹಾರ್ಟಿಗೆ
ಪ್ರೇಯಸಿಯಾಗಿರುವಳು…

ಅವಳು ಸಿಟಿ ಸುಂದರಿಯಲ್ಲ.
ಅವಳ ಮೈಬೆವರಿನ ಸುವಾಸಣೆ ಯಾವ
ಸುಂದರಿಯ ಸೆಂಟ ವಾಸನೆಗಿಂತಲೂ ಕಮ್ಮಿಗಿಲ್ಲ…

ಫ್ಯಾಷನ್ ಎಂದರೆ ಅವಳಿಗೇನಂತ ಗೊತ್ತಿಲ್ಲ
ಲಿಪಸ್ಟಿಕ್ಕಿನ ನೆರಳು ಅವಳ
ತುಟಿಗಳ ಮೇಲಿನ್ನೂ ಬಿದ್ದಿಲ್ಲ.
ಸೀರೆಯುಟ್ಟರೆ ಅವಳಿಗಿಂತ
ಸೆಕ್ಸಿಯಾಗಿರೋ ಸುಂದರಿ ಎಲ್ಲೂ ಸಿಗಲ್ಲ…

ಪ್ರೀತಿಗೆ ಕಣ್ಣಿಲ್ಲ, ಅವಳನ್ನು ನೋಡಲು
ನನ್ನೆರಡು ಕಣ್ಣುಗಳು ಸಾಲಲ್ಲ.
ಪ್ರೀತಿಗೆ ಸಾವಿಲ್ಲ, ಅವಳನ್ನು ಪ್ರೀತಿಸಲು
ನನ್ನ ಒಂದು ಹೃದಯ ಸಾಕಾಗಲ್ಲ.
ಅವಳು ಗುಡಿಯಲ್ಲಿರೋ ದೇವತೆಯಲ್ಲ
ಅರಮನೆಯಲ್ಲಿರೋ ರಾಣಿಯೂ ಅಲ್ಲ.
ಅವಳು ನನ್ನೆದೆಯ ಗುಡಿಸಲಲ್ಲಿರೋ
ಸಿಂಪಲ್ ಸುಂದರಿ…

ಅವಳಿಗೆ ಅರಮನೆ ಕಟ್ಟೋ ಆಸೆಯಿಲ್ಲ
ನೆರಮನೆಯವರನ್ನು ನೋಡಿಯಾಕೆ
ಹೊಟ್ಟೆ ಉರಿದುಕೊಳ್ಳುವುದಿಲ್ಲ.
ಕಾಸ್ಟ್ಲಿ ಗಿಫ್ಟಗಳು ಬೇಕೆಂದು
ಅವಳು ಗೋಳಿಡುವುದಿಲ್ಲ…
ಅವಳ ನಗುವಿಗೆ ಯಾವ
ಹೂಗಳು ಅರಳಲ್ಲ.
ಆದರೆ ಅವಳ ನಗುವಿಗೆ ನನ್ನ ಹೃದಯ
ಖಂಡಿತ ಅರಳುತ್ತೆ,
ಅವಳು ನಗದಿದ್ದರೆ ಮರಗುತ್ತೆ…

ಅವಳು ಜಾಸ್ತಿ ಓದಿಲ್ಲ.
ಅವಳಿಗೆ ಒಣಜಂಭವಿಲ್ಲ.
ಅವಳು ಎಲ್ಲ ಹುಡುಗಿಯರಂತೆ
ಸುಂದರ ಸುಶೀಲೆಯಲ್ಲ.
ತುಂಟತನ ಮಾಡುತ್ತಾ ಸದಾ
ಸಂತೋಷವಾಗಿರುವ ಪೋಲಿ ಅವಳು…

ಅವಳ ಮುಗುಳ್ನಗೆ, ಕೊಲ್ಲುವ ಕಣ್ಣೋಟ
ಯಾವ ಅಸ್ತ್ರಗಳಿಗೂ ಕಮ್ಮಿಯಿಲ್ಲ.
ಅವಳ ಕಣ್ಣೋಟ = ಯಾರ್ಕರ್
ಅವಳ ನಗು = ಗೂಗ್ಲಿ
ಅವಳ ಕೋಪ = ಬೌನ್ಸರ್ ಎಂದರೆ
ಅವಳು ನನ್ನ ಸುಮ್ನೆ ಬಿಡಲ್ಲ…

ಪ್ರೇಯಸಿ ಅಥವಾ ಮಡದಿ ಜೀವನದ ಒಂದು ಭಾಗವಲ್ಲ. ಈಡೀ ಜೀವನವೇ ಅವಳು. ಕಷ್ಟಗಳು ಬಂದಾಗ ಗೆಳೆಯರು ನೆಪ ಹೇಳಿ ದೂರ ಉಳಿಯಬಹುದು. ಆದರೆ ಅವಳು ದೂರ ಉಳಿಯಿಲ್ಲ. ಸಂಬಳವಿಲ್ಲದೆ ಕೆಲಸ ಮಾಡುವ, ಸ್ವಾರ್ಥವಿಲ್ಲದೆ ಸಹಾಯ ಮಾಡುವ ಏಕೈಕ ವ್ಯಕ್ತಿಯೆಂದರೆ ಅವಳು ಮಾತ್ರ…

8) 18 ಪ್ರೇಮ ಕವನಗಳು – ಕನ್ನಡ ಪ್ರೀತಿಯ ಕವನಗಳು – Short Love Poems in Kannada – Kannada Love Kavanagalu

೧) ಹೂವಿಗಿಂತ ಮಿಗಿಲಾದ ನಗು ನಿನ್ನದು
ಚಿನ್ನಕ್ಕಿಂತ ಅಸಲಾದ ಗುಣ ನಿನ್ನದು
ಮುತ್ತಿಗಿಂತ ಮಧುರವಾದ ಮಾತು ನಿನ್ನದು
ಚಂದ್ರನಿಗಿಂತ ಸೊಗಸಾದ ರೂಪ ನಿನ್ನದು
ಇದೆಲ್ಲವನ್ನು ಪ್ರೀತಿಸುವ ಹೃದಯ ನನ್ನದು
ಈ ಹೃದಯವನ್ನು ಪ್ರೀತಿಸುವ ಕರ್ತವ್ಯ ನಿನ್ನದು…

೨) ನಿಜವಾಗಿಯೂ ನೀನೇ ನನ್ನ ಸಂಪತ್ತು
ನೀ ಜೊತೆಗಿದ್ದರೆ ನನಗಿಲ್ಲ ಯಾವುದೇ ಆಪತ್ತು
ಪರಸ್ಪರ ಸೋಲುವಿಕೆ ಪ್ರೀತಿಯ ಶರತ್ತು
ಎಂದೆಂದಿಗೂ ನೀನು ನನ್ನ ಸೊತ್ತು
ಪ್ರಿಯೆ ಇದು ನಿನಗೂ ಗೊತ್ತು…

೩) ಕೆಂಗಣ್ಣಿನಿಂದ ಉರಿ ಸೂಸುವ ಸೂರ್ಯನಂತೆ ನೀ ನನ್ನ ನೋಡದಿರು. ಏಕೆಂದರೆ ರಾತ್ರಿ ತಂಪನ್ನು ಸೂಸುವ ಚಂದ್ರನಿಗಿಂತಲು ಮಿಗಿಲಾದ ಪ್ರೀತಿ ನನ್ನದು…

೪) ನಿನ್ನ ನಗುವಿನ ರಸದೌತಣ
ನನ್ನ ಪ್ರೀತಿಗೆ ನೀ ಕೊಡುವ ವೇತನ…
ಅದನ್ನು ಕಡೆತನಕ ಗಳಿಸುವುದೇ
ನನ್ನ ಜಾಣತನ…

೫) ಕಾಲ್ಗೆಜ್ಜೆ ಸದ್ದಿನಲ್ಲಿ
ಆಕೆಯ ಸಂಚಾರ,
ಮೂಡಿಸಿತು ಮನದಲಿ
ಪ್ರೀತಿಯ ಇಂಚರ…

೬) ದೂರದಿರು ನನ್ನನ್ನು ಓ ಗೆಳೆಯ
ನಿನಗಾಗಿಯೇ ಮೀಸಲಾಗಿದೆ ಈ ಹೃದಯ
ಕನಸ್ಸಲ್ಲು ಅನುಮಾನಿಸದಿರು ನನ್ನ ಪ್ರೀತಿಯ
ಜೀವಸವೆದರು ನೀನೇ ನನ್ನ ಇನಿಯ…

೭) ನನ್ನ ಪ್ರೇಯಸಿ ಅಪರೂಪದ ರೂಪಸಿ
ಸತಾಯಿಸುವಳು ನನ್ನ ಸದಾ ಕಾಯಿಸಿ
ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

೮) ಆಕೆ ನನ್ನ ಮನದ ಮಹಾರಾಣಿ
ನಾ ಹೇಳಬೇಕಿಲ್ಲ ಅವಳಿಗೆ ಬುದ್ಧಿವಾಣಿ
ಪದೇ ಪದೇ ಅವಳೇ ಹೇಳ್ತಾಳೆ ಕಹಾನಿ
ಮುನಿದಾಗ ಆಕೆ ಆವೇಶದ ಅಗ್ನಿ.
ಆದರೂ ಅವಳೇ ನನ್ನ ಮುದ್ದು ಅರಗಿಣಿ…

೯) ಮಲೇರಿಯಾ ಬರುತ್ತೆ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ,
ಚಿಕನಗುನಿಯಾ ಬರುತ್ತೆ ಏಡಿಸ್ ಹೆಣ್ಣು ಸೊಳ್ಳೆಯಿಂದ,
ಪ್ರೀತಿ ಕಾಯಿಲೆ ಬರುತ್ತೆ ಹೃದಯಾನಾ ಕೊಳ್ಳೆ ಹೊಡೆದ ಪ್ರೇಯಸಿ ಎಂಬ ಸುಂದರ ಸೊಳ್ಳೆಯಿಂದ…

೧೦) ಅವಳ ನೋಟ ಮನಮೋಹಕ
ಅವಳ ನಡದ ನಡಿಗೆ ಮಾದಕ
ಮುಂಚೆ ನಾನೋರ್ವ ಶ್ರೇಷ್ಠ ಸಾಧಕ
ಆದರೀಗ ಅವಳ ನಿಷ್ಟ ಸೇವಕ…

೧೧) ನೀ ನನ್ನ ಬೆರೆತರೆ
ಬೇಕೆ ಅನ್ಯರ ಅಕ್ಕರೆ?
ನೀ ನನ್ನ ಮರೆತರೆ
ಖಾತ್ರಿಯಾದೀತು ಗಂಡನ ಮನೆಯ ಸೆರೆ…

೧೨) ನೂರು ನೂರು ಸಾರಿ
ನಿನ್ನನ್ನೇ ಕೇಳುತ್ತಿರುವೆನು ನಾರಿ
ನನ್ನಿಂದ ದೂರಾಗದಿರು ಜಾರಿ
ನನ್ನ ಪ್ರೀತಿಯನ್ನು ಒಪ್ಪಿಕೊಂಡಾಗು ಆಭಾರಿ.
ಏಕೆಂದರೆ ನೀನೇ ನನ್ನ ಮನಕದ್ದ ಚೋರಿ…

೧೩) ಮನದೊಳು ಜನಿಸಿದ
ಪ್ರೇಮದ ಸಿಂಚನ,
ವಿರಹದ ನೆಪದಲಿ
ಮಾಡಿದೆ ನಯನದ ಕನಸುಗಳ ಮಥನ…

೧೪) ಆಕೆ ಉಟ್ಟ ಗುಲಾಬಿ ಸಾಡಿ
ಮಾಡಿತು ಮನಕ್ಕೆ ಪ್ರೇಮದ ಮೋಡಿ
ನೋಡುತ್ತಾ ಹಿಂದೆಯೇ ಹೋದೆ ಓಡಿ
ತಳ್ಳುತ್ತಾ ಪಂಕ್ಚರ್ ಆದ ಹೃದಯದ ಗಾಡಿ…

೧೫) ಏಳೇಳು ಜನ್ಮದ ಬಂಧ ನಮ್ಮದು
ಜೀವಸವೆದರು ಸೋಲದ ಸ್ನೇಹ ನಮ್ಮದು
ಆದರೆ ಅದನ್ನು ಹುಸಿಯಾಗಿಸುವ
ಹುಚ್ಚು ಪ್ರಯತ್ನವೇಕೆ ನಿನ್ನದು?

೧೬) ನೆತ್ತರದಿ ಬರೆದಾಗಿದೆ ಪ್ರೇಮ ಕಾದಂಬರಿ
ಅದನ್ನೊಮ್ಮೆ ಓದುವೆಯಾ ಬಂಗಾರಿ?
ನಿನ್ನ ಹೆಜ್ಜೆ ಹಿಂದೆ ಸಾಗಿದೆ
ನಮ್ಮಿಬ್ಬರ ಪ್ರೀತಿ ಅಂಬಾರಿ…
ನಿನ್ನ ತಿರಸ್ಕಾರದಿಂದ ನಮ್ಮ
ಪ್ರೀತಿಯಾಗದಿರಲಿ ಕವಲುದಾರಿ…

೧೭) ಓ ನನ್ನ ಹುಡುಗಿಯೇ
ನೀನೀಗ ಏಲ್ಲಿರುವೆ?
ನನ್ನ ಬಿಟ್ಟು ಏನು ಮಾಡುತ್ತಿರುವೆ?
ನೀನೀಗ ಮರೆಯಾಗಿ ಯಾರಿಗಾಗಿ ಕಾದಿರುವೆ?
ನೀನು ನಿಜವಾಗಿಯೂ ನನ್ನ ಹುಡುಗಿಯೇ?

೧೮) ನಿನ್ನ ಕಣ್ಣ ಕಾಡಿಗೆ
ಕೇಳಿದೆ ಪ್ರೇಮದ ಬಾಡಿಗೆ…
ನಾನೇನು ಹೇಳಲಿ ನಿನ್ನ ಮೋಡಿಗೆ?
ನನಗೆ ಬೇಕು ನಿನ್ನ ಮನದ ಪ್ರೀತಿ ಬಿಂದಿಗೆ…

10) ದ್ವಂದ್ವ ಪ್ರೀತಿ… Kannada Love Poetry

೧) ದ್ವಂದ್ವ ಪ್ರೀತಿ…

ಪ್ರೀತಿ ಪ್ರೇಮದ ಭಾವನೆ
ಮನಸೇರುವುದು ಹಾಗೇ ಸುಮ್ಮನೆ…
ಅದು ಹೃದಯದ ಒಳಮಿಡಿತಗಳನ್ನು
ತುಟಿಗಳಿಲ್ಲದೇ ಸೇರಿಸುವ ಸೇತುವೆ…

ಹಲವು ಸಲ ಅದು ಜೀವನದ
ದಡ ಸೇರಿಸುವ ಬಾಳದೋಣಿ…
ಕೆಲವು ಸಲ ಅದು ಜೀವನವನ್ನೇ
ಮುಳುಗಿಸುವ ಹಾಳದೋಣಿ…

ಎರಡು ಹೃದಯಗಳ ಸಮ್ಮಿಲನ
ಪ್ರೀತಿ ಬೇಸುಗೆಯ ಪ್ರತೀತಿ..
ಎರಡು ಹೃದಯಗಳ ಅಡ್ಡಚಲನ
ಪ್ರೀತಿಯ ಒಣ ಫಜೀತಿ…

ಪ್ರೀತಿಗ್ಯಾಕಿದೆ ಈ ದ್ವಂದ್ವ ಸ್ವರೂಪ?
ನಿಜವಾದ ಪ್ರೇಮಿಗಳೇ ಪ್ರಾಣ
ಕಳ್ಕೋತ್ತಾರೆ ಅಯ್ಯೋ ಪಾಪ…!!

೨) ಚಟದ ಚಟ್ಟ…

ವಿರಹ ಕೊಟ್ಟ ಮಾಜಿ ಗೆಳತಿಯಿಂದ
ಪರಿಚಯವಾಯಿತು ಚಟ…
ವಿನಾಯತಿ ಸಿಗರೇಟ ಹೊಗೆಯಲ್ಲಿ
ನೆನಪಾಯಿತು ಪ್ರೀತಿಯ ಹಟ…

ರಿಯಾಯತಿ ಕುಡಿತದಿಂದ ಹೆಚ್ಚಾಯಿತು
ಹಳೇ ಹುಡ್ಗಿ ನೆನಪಿನ ಕಾಟ…
ಅಕಾಲ ಸಾವಿನ ಸುದ್ದಿಯಿಂದ
ಖುಷಿಪಟ್ಟಿತು ಚಟ್ಟ…

ಸಮಾಧಿಯ ಸಂದಿಗೊಂದಿಯಲ್ಲಿ
ಮಲಗಿತು ಭವಿಷ್ಯದ ಪಟ್ಟ…
ಸತ್ತವರ ಸುದ್ದಿಯಿಂದ ಇತರರು
ಕಲಿಬಹುದಾ ಒಂದು ಪುಕ್ಸಟ್ಟೆ ನೀತಿಪಾಠ?

13) ವಿರಹದ ವಿಷ : Sad Love Poetry – Feeling Kavana

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಗರ್ಜಿಸುವ ಸಿಡಿಲೆದುರಾದರೂ ಸೋಲದ
ಸೆಲೆ ನನ್ನದಾಗಿರುವಾಗ, ನಿನ್ನ ಆ
ವಿರಹದ ಗುಡುಗನ್ನು ಬಿಗಿದಪ್ಪಿಕೊಳ್ಳುವ
ಕಲೆಯನ್ನು ಕಲಿಸಿ ದೂರ ಹೋಗಬಾರದಿತ್ತೆ..?

ಸಪ್ತ ಮಹಾಸಾಗರಗಳ ಆರ್ಭಟವನ್ನು
ಎದುರಿಸುವ ಧೀರ ನಾನಾಗಿರುವಾಗ,
ನಿನ್ನ ಆ ವಿರಹದ ಪ್ರವಾಹದಲ್ಲಿ ಈಜುವ
ಛಲವನ್ನು ಬೆಳೆಸಿ ಮರೆಯಾಗಬಾರದಿತ್ತೆ..?

ಕಾದ ದೈತ್ಯಧರೆಗೆ ಮಳೆ ಸುರಿಸಿ ತಂಪು
ನೀಡುವ ಆಸೆ ನನ್ನದಾಗಿರುವಾಗ, ನಿನ್ನ ಆ
ವಿರಹದ ಬೆಂಕಿಮಳೆಗೆ ಆಸರೆಯಾಗಿ ಒಂದು
ಪ್ರೀತಿಯ ಕೊಡೆಯನ್ನಾದರೂ ಕೊಡಬಾರದಿತ್ತೆ..?

ಸಾಗರದಷ್ಟು ಹಾಲಾಹಲ ವಿಷ ಪಾನಿಸಿದರೂ
ಬದುಕುವ ಹಟ ನನ್ನಲ್ಲಿರುವಾಗ, ನಿನ್ನ ಆ
ವಿರಹದ ವಿಷದಿಂದ ನನ್ನ ಉಳಿಸಲು
ನೀ ಮತ್ತೆ ಅಮೃತವಾಗಿ ಬರಬಾರದಿತ್ತೆ..?

14) ನಾನ್ಯಾರು…???? Kannada Poetry – ಕವನ

ನಾನ್ಯಾರು ಎಂಬುದನ್ನು ಅರಿಯದಾಗಿರುವೆನು,
ನನಗೇನು ಕೆಲ್ಸವೆಂಬುದನ್ನು ತಿಳಿಯದಾಗಿರವೇನು,
ಅನ್ಯರು ಅಳಿದರೂ ಪರವಾಗಿಲ್ಲ, ನಾ ಮಾತ್ರ
ಉಳಿದರೆ ಸಾಕೆನ್ನುತ್ತಿರುವೆನು…

ಪರಿಶ್ರಮದಿಂದ ಮೇಲೆ ಬರುವವರನ್ನು
ತುಳಿಯಲು ಪ್ರಯತ್ನಿಸುತ್ತಿರುವೆನು,
ಹೆತ್ತವಳನ್ನು ಬೀದಿಗೆ ಎಸೆದಿರುವೆನು,
ಹೊತ್ತವಳನ್ನು ಕಸದಂತೆ ಕಾಣುತ್ತಿರುವೆನು…

ಮುತ್ತು ಕೊಡುವವಳು ಬಂದಾಗ
ತುತ್ತು ಕೊಟ್ಟವಳನ್ನು ಮರೆಯುವೆನು,
ಅಡ್ಡದಾರಿಗೆಳೆಯುವವಳು ಸಿಕ್ಕಾಗ
ಕೈ ಹಿಡಿದವಳನ್ನೇ ಬಿಟ್ಟು ಬಿಡುವೆನು…

ನಿಸರ್ಗ ದೇವತೆಗೆ ಅತ್ಯಾಚಾರವೆಸಗಿ
ಅಟ್ಟಹಾಸದಿಂದ ಮೆರೆಯುತ್ತಿರುವೆನು,
ನನಗ್ಯಾರು ಹೇಳುವ ಕೇಳುವವರಿಲ್ಲದೇ
ನಾನೇ ಶ್ರೇಷ್ಠವೆಂದು ಬಿಗುತ್ತಿರುವೆನು…

ಇತರರ ಸಂತಸಕ್ಕೆ ಕಾರಣವಾಗದೆ
ಎಲ್ಲರ ದು:ಖಕ್ಕೆ ಕಾರಣವಾಗುತ್ತಿರುವೆನು.
ಸತ್ಯ, ಧರ್ಮ, ನ್ಯಾಯ ನೀತಿಯನ್ನೆಲ್ಲ ಮರೆತು
ಅನ್ಯಾಯದ ದಾರಿಯಲ್ಲಿ ಸಾಗುತ್ತಿರುವೆನು…

ಮನೆಗೆ ಉಪಕಾರಿಯಾದರೆ ಏನಾಯಿತು?
ದೇಶಕ್ಕೆ ದೊಡ್ಡ ಮಾರಿ ನಾನು.
ದೇಶಪ್ರೇಮವನ್ನು ಸ್ವಾರ್ಥಕ್ಕಾಗಿ ಕೊಂದಿರುವೆನು.
ನನಗ್ಯಾರು ಸರಿದಾರಿ ತೋರಿಸುವವರು ಇಲ್ಲವೇನು?

ನನ್ನನ್ನು ನೀವು ನೋಡಬೇಕೆಂದರೆ
ಕನ್ನಡಿಯಲ್ಲೊಮ್ಮೆ ನಿಮ್ಮ ಮುಖವನ್ನು
ತಪ್ಪದೇ ನೋಡಿಕೊಳ್ಳಿ ಸಾಕು.
ನಾನು ಸಹ ನಿಮ್ಮಂಥೇ ಮಾನವನ
ರೂಪದಲ್ಲಿರುವ ನರರಾಕ್ಷಸ…

15) ಮುರಿದ ಮನಸ್ಸು : Sad Poetry – ಕನ್ನಡ ಪ್ರೇಮ ಕವನಗಳು : kannada feeling kavanagalu

ಒಡೆಯದ ಕನ್ನಡಿಯಲ್ಲಿ ಮೂಡುವ
ಪರಿಪೂರ್ಣ ಬಿಂಬದಂತೆ,
ನನ್ನ ಮುರಿದ ಮನಸ್ಸಲ್ಲಿ
ನಿನ್ನ ಮರೆಯದ ನೆನಪುಗಳಿವೆ…

ಕನಸ ಕಾಣುವ ಕಂಗಳೆ ಕಂಗಾಲಾಗಿರುವಾಗ
ವಿರಹದ ಮುಳ್ಳುಗಳು ಎದೆಗೆ ಚುಚ್ಚಿವೆ…
ನಿನ್ನನ್ನು ಓಲೈಸುವಲ್ಲಿ ನಾ ಸೋತೆ,
ಪ್ರೀತಿ ಬತ್ತಿ ಆರಿತು ನನ್ನ ಬಾಳ ಹಣತೆ…

ಭೂಮಿ ಮುಕ್ಕಾಲು ಸಾಗರದ ನೀರಿದ್ದರೂ
ಕೈ ಬೊಗಸೆ ತಿಳಿ ನೀರು ಸಾಕು ಕುಡಿಯಲು,
ಆಗಸದಷ್ಟು ಸಂತಸದ ಕ್ಷಣಗಳಿದ್ದರೂ
ನೀನಿಲ್ಲದ ಒಂದು ಕ್ಷಣ ಸಾಕು ನಾ ಕಣ್ಣೀರಿಡಲು…

ಸಂತೈಸುವ ಸಾವಿರಾರು ಹೃದಯಗಳಿದ್ದರೂ
ಪ್ರೀತಿಸುವ ಹೃದಯವಿಲ್ಲದೇ ಆಗಲ್ಲ ಬದುಕಲು,
ಜಗವನ್ನೇ ಪ್ರೀತಿಸಿದ ವಿಶಾಲ ಹೃದಯ ನನ್ನದಾದರೂ
ಸಾಲದಾಯಿತೆ ನಿನ್ನನ್ನು ಕೊನೆತನಕ ಪ್ರೀತಿಸಲು..?

16) ಬಂಜರು ಬದುಕು : ಕನ್ನಡ ಕವನಗಳು – Kannada Kavanagalu About Life

೧) ಬಂಜರು ಬದುಕು

ಇತ್ತೀಚಿಗೆ ನನಗೆ ತುಂಬಾನೆ ಬೇಜಾರು
ಯಾಕಂದ್ರೆ ಈ ಭೂಮಿಯೀಗ ಬಂಜರು.
ಎಲ್ಲಿ ಕಟ್ಟಿಕೊಳ್ಳಲಿ ನನ್ನ ನೆಮ್ಮದಿಯ ಸೂರು?
ನನಗೆ ಎಲ್ಲಿಯೂ ಕಾಣುತ್ತಿಲ್ಲ
ನಿಜವಾದ ಸ್ನೇಹ ಪ್ರೀತಿ ಒಂಚೂರು…

ಯಾರನ್ನು ನಂಬಲಿ?
ಯಾರನ್ನು ಬಿಡಲಿ?
ಯಾರನ್ನು ಪ್ರೀತಿಸಲಿ?
ಯಾರನ್ನು ದ್ವೇಷಿಸಲಿ?
ಯಾರಿಗಾಗಿ ಬದುಕಲಿ?
ಯಾರಿಗಾಗಿ ಸಾಯಲಿ?

ಯಾವುದನ್ನು ನೆನೆಯಲಿ?
ಯಾವುದನ್ನು ಮರೆಯಲಿ?
ಯಾರೊಡನೆ ಬದುಕ ಸಾಗಿಸಲಿ?
ನನ್ನ ಬದುಕಾಗಿದೆ ಈಗ ಬಂಜರು
ಅದಕ್ಕೆ ನನಗೆ ಎಲ್ಲರ ಮೇಲೆ
ವಿಪರೀತ ಬೇಜಾರು…

೨) ಲಂಚಾವತಾರ…

ಲಂಚಾವತಾರ ತುಂಬಾ ಭಯಂಕರ
ಲಂಚಕ್ಕೆ ಬೆಚ್ಚಿ ಬಿದ್ದ ಶಿವಶಂಕರ
ನೀವಾಗದಿರಿ ಲಂಚದ ಕಿಂಕರ
ಭ್ರಷ್ಟರಿಗೆ ಹೇಳಿರಿ ದೊಡ್ಡ ಧಿಕ್ಕಾರ…

ತೋರಿ ದೇಶದೆಡೆಗೆ ಸ್ವಲ್ಪ ಮಮಕಾರ
ಸರ್ಕಾರಿ ಕೆಲ್ಸದಿಂದ ಆಗ್ಬೇಡಿ ಸಾಹುಕಾರ
ಕೇಳಿಸಿರಿ ಸ್ವಚ್ಛ ಕರ್ಮದ ಓಂಕಾರ
ಮೊಳಗಿಸಿರಿ ನಿರ್ಮಲ ಭಾರತದ ಝೇಂಕಾರ…

ಸ್ವಚ್ಛವಾಗಿದ್ದರೆ ಆಯ್ದ ಸರ್ಕಾರ
ಮಾತ್ರ ಹಾಕಿರಿ ಅದಕ್ಕೆ ಜೈಜೈಕಾರ
ಸರ್ಕಾರವೇ ನಡೆಸಿದರೆ ಭ್ರಷ್ಟಾಚಾರ
ತೋರಿಸಿರಿ ಪ್ರಜಾಪ್ರಭುತ್ವದ ಅಧಿಕಾರ…

ಮಾಡಿರಿ ಅಭಿವೃದ್ಧಿಯ ಕನಸಿನ ಸಾಕಾರ
ರಾತ್ರಿಯಲ್ಲೂ ನಡೆಯಲಿ ಸ್ವಚ್ಛ ವ್ಯವಹಾರ
ಅಡ್ಡದಾರಿ ವಿರುದ್ಧ ಎತ್ತಿ ಚಕಾರ
ಮೇಲೆ ಬನ್ನಿ ಸುರಿಸಿ ನಿಮ್ಮ ಸ್ವಂತ ಬೆವರ…

೩) ಸಮಯ ಸಾಧಕರು…

“ಅನುಭವವಿರುವಲ್ಲಿ ಅಮೃತವಿದೆ”
ಎಂದರು ಬಲ್ಲವರು…

“ಅತೀಯಾದರೆ ಅಮೃತವೂ ವಿಷ”
ಎಂದರು ದಿವಿಜರು…

“ಮಿತವಾದರೆ ವಿಷವೂ ಅಮೃತ”
ಎಂದರು ಮಹಾಂತರು…

“ದುರಾಸೆಯೆ ದು:ಖಕ್ಕೆ ಮೂಲ”
ಎಂದರು ಜ್ಞಾನಿಯರು…

“ಪ್ರೀತಿಗೆ ಎಂದೂ ಸಾವಿಲ್ಲ”
ಎಂದರು ಪ್ರೇಮಿಯರು…

“ನೀವು ಸಾಕಾಗುವಷ್ಟು ಹೇಳಿ.
ಆದರೆ ನಾವು ಸತ್ರೂ ಕೇಳಲ್ಲ”
ಎಂದರು ಗಾವಿಲರು…

“ಹೇಳೋದು ಸುಲಭ. ಆದರೆ ಆಚರಣೆ
ದುರ್ಲಭವೆಂದು ತಿಳಿದು ಸುಮ್ಮನಿರಿ”
ಎಂದರು ಸಮಯಸಾಧಕರು…

17) 4 ಟೈಮ್ ಪಾಸ್ ಪ್ರೇಮಗೀತೆಗಳು…. – ಪ್ರೇಮ ಕವನ ಪ್ರೀತಿಯ ಕವನ

೧) ಹೃದಯದಾನ

ಕೇಳು ಓ ನನ್ನ ಪ್ರೇಯಸಿಯೇ,
ಹಸಿದವರಿಗೆ ಮಾಡು ಅನ್ನದಾನ
ಸಾಯುವವರಿಗೆ ಮಾಡು ರಕ್ತದಾನ
ಸತ್ತ ಮೇಲೆ ಮಾಡು ದೇಹದಾನ
ಮೂಢರಿಗೆ ಮಾಡು ವಿದ್ಯಾದಾನ
ಸ್ನೇಹಿತರಿಗೆ ಮಾಡು ಜೀವದಾನ…

ಕುರುಡರಿಗೆ ಮಾಡು ನೇತ್ರದಾನ
ಬಡವರಿಗೆ ಮಾಡು ಭೂದಾನ
ನೊಂದವರಿಗೆ ಮಾಡು ಸಮಾಧಾನ
ಇವ್ಯಾವ ದಾನಗಳನ್ನು ನಿನ್ನಿಂದ
ಮಾಡಲಾಗದಿದ್ದರೂ ಪರವಾಗಿಲ್ಲ.

ನಿನ್ನನ್ನು ಹುಚ್ಚನಂತೆ ಪ್ರೀತಿಸುವ
ಈ ಹುಚ್ಚು ಪ್ರೇಮಿಗೆ
ಮಾಡು ನಿನ್ನ ಹೃದಯದಾನ…
ಅದುವೇ ದಾನಗಳ ದಾನ
ಮಹಾದಾನ ಹೃದಯದಾನ…

೨) ಅರ್ಥವಾಗದ ಅಸ್ಥಿರ ಪ್ರೀತಿ

ಕಗ್ಗತ್ತಲ ಕನಸಲ್ಲಿ ಕಾಡುವ ತಾರೆ
ಮುಂಜಾನೆಯ ಬೆಳಕಲ್ಲಿ ಓಲೈಸು ಬಾರೆ
ನೀನು ಅಂತಸ್ತಿನಲ್ಲಿ ಅರಳಿದ ಕೆಂದಾವರೆ,
ನಾನು ಬಡತನದಲ್ಲಿ ಬೆಂದ ಅವರೆ…

ಓ ತಾರೆ, ನೀನು ಬೆಳದಿಂಗಳ ಬಾಲೆ
ನನಗರ್ಥವಾಗ್ತಿಲ್ಲ ನಿನ್ನ ಸೌಂದರ್ಯದ ಕಲೆ
ನಡುದಾರಿಯಲ್ಲಿ ದಾರಿ ತಪ್ಪಿದೆ ಮನದಲೆ
ಹೇಳು ಓ ತಾರೆ ನಾನೇನು ಮಾಡಲೇ?

ನಾ ನಿನ್ನ ಮನಸಾರೆ ಪ್ರೀತಿಸಲೇ?
ನಿನ್ನ ಪ್ರೀತಿ ಬೇಡೆಂದು ದೂರ ಓಡಲೇ?
ನೀನು ನಿಲುಕದ ದ್ರಾಕ್ಷಿಯೆಂದು
ಮನದಲ್ಲಿ ಮರುಗಲೇ?
ಇಲ್ಲ ನಿನ್ನ ಪ್ರೀತಿಸಲು
ನಿನ್ನ ಅನುಮತಿ ಕೇಳಲೇ?

೩) ನಿನಗಾಗಿಯೇ…

ನಿನಗಾಗಿಯೇ ಈ ಗೀತೆಯ ನಾ ಹಾಡುವೆ
ನನಗಾಗಿಯೇ ಆ ಗೀತೆಯ ನೀ ಕೇಳುವೆ
ಮುಖವೇ ಮನಸ್ಸಿನ ಕೈಗನ್ನಡಿ
ನಿನ್ನ ಪ್ರೀತಿ ಅರ್ಥವಾಯ್ತು ನಿನ್ನ ಮುಖ ನೋಡಿ…

ಪ್ರೀತಿಯಿದ್ದರೂ ನೀನ್ಯಾಕೆ ಹೇಳಲಾರೆ?
ಧೈರ್ಯವಿಲ್ಲದೇ ನಾ ನಿನ್ನ ಕೇಳಲಾರೆ.
ಕಣ್ಣರೆಪ್ಪೆ ಮಿಡಿತವೇ ಪ್ರೀತಿಯ ಪತ್ರ
ಕಣ್ಣ ಸಾಕ್ಷಿಗೂ ನಾ ನಿನ್ನ ಪ್ರೀತಿಗೆ ಪಾತ್ರ…

ನನ್ನ ಪ್ರೀತಿ ಆಗಸಕ್ಕಿಂತಲೂ ಮಿಗಿಲು
ನೀ ಬಂದರೆ ನಿಲ್ಲುವುದು ಮನದ ದಿಗಿಲು
ಅಕ್ಷತೆಗಳನ್ನು ಸುರಿಸುತ್ತೆ ಆ ಮುಗಿಲು
ನನ್ನ ಪ್ರೀತಿಯನ್ನು ನೀ ಕಾಯಲು…

೪) ಭರವಸೆಯಿಲ್ಲದ ಬಾಳದೋಣಿ

ನನ್ನ ಬಾಳದೋಣಿ ಸಾಗಲು
ನೀನೇ ನಾವಿಕನಾಗಬೇಕು…

ನಿನ್ನ ಬದುಕ ದೀಪ ಉರಿಯಲು
ನಾನೇ ಎಣ್ಣೆಯಾಗಬೇಕು…

ನನ್ನ ಮನವರಳಲು
ನಿನ್ನ ನಗುವೇ ಸಾಕು…

ನಿನ್ನ ಮೊಗ ನಗಲು
ತೋಳಚಾಚಿ ನನ್ನೊಮ್ಮೆ ಸೋಕು…

ಇರಲಿ ಪ್ರೀತಿಲಿ ನೂರು ಜೋಕು
ತಗಲದಿರಲಿ ವಿರಹದ ಒಂದು ಸೋಂಕು…

18) ಸೋತಾಗ ಸ್ಪೂರ್ತಿಯಾಗುವ ಕವನಗಳು – ಕನ್ನಡ ಕವನಗಳು – ಬದುಕಿನ ಕವನಗಳು – Kannada Kavanagalu about Life

೧) ಸಾಧನೆಯ ಗಾಳಿಪಟ

ವಿಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ
ಅದನ್ನು ಸಾಧಿಸುವ ಹಟ ನಿನ್ನದಾಗಲಿ…

ನಿಶ್ಚಲ ಹೃದಯವೇ ನಿನಗೆ ಬಲವಾಗಲಿ
ನಿಷ್ಕಪಟ ಪರಿಶ್ರಮವೇ ನಿನ್ನ ದೈವವಾಗಲಿ…

ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ
ಆ ನಂಬಿಕೆ ದುಷ್ಟ ಅಹಂಕಾರವಾಗದಿರಲಿ…

ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ
ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ…

ನಿನ್ನ ಕೀರ್ತಿ ಕೇಳಿ ನಿನ್ನ ತುಟಿಗಳು ನಿನ್ನೆದೆಗೆ
ನಾಟುವಂತೆ ನಗು ಬೀರಲಿ…

ಅನ್ಯರಿಗೆ ನೆರವಾಗುವ ಗುಣ ನಿನ್ನಲ್ಲಿರಲಿ
ಇದೇ ನಿನ್ನ ಸಾಧನೆಯ ಗಾಳಿಪಟವಾಗಲಿ…

೨) ಬಾಳು ಬರೀ ಗೋಳಲ್ಲ…

ಬಡತನವಿದ್ದರೂ ಕುಗ್ಗದಿರು
ಸಿರಿತನವಿದ್ದರೂ ಹಿಗ್ಗದಿರು
ಏನಾದರೂ ಬದುಕುವ ಛಲವನ್ನು ಬಿಡದಿರು.
ಬಡತನವೆಂದು ಶಾಪವಲ್ಲ
ಸಿರಿತನವೆಂದು ವರವಲ್ಲ
ಜೀವನದಲ್ಲಿ ಯಾವುದು ಶಾಶ್ವತವಲ್ಲ…

ಸೋಲಿಗೆ ಹೆದರಿ ಸಾಯದಿರು
ಗೆಲುವಿಗೆ ತುಂಬಾ ಖುಷಿ ಪಡದಿರು
ಏನಾದರೂ ಹತಾಶಭಾವ ತಳೆಯದಿರು
ಸೋಲೆಂದು ಶಿಕ್ಷೆಯಲ್ಲ
ಗೆಲುವೆಂದು ರಕ್ಷೆಯಲ್ಲ
ಹೋರಾಟದ ಬದುಕಲ್ಲಿ ಯಾವುದು ನಿಶ್ಚಯವಲ್ಲ…

ಸಂಕಷ್ಟ ಬಂದಾಗ ಅಳದಿರು
ಸಂತಸ ಬಂದಾಗ ಬಹಳ ನಗದಿರು
ಏನಾದರೂ ಬದುಕಿನ ಮೇಲೆ ಜಿಗುಪ್ಸೆ ಪಡದಿರು.
ಸಂಕಷ್ಟವೆಂದು ಸವಾಲಲ್ಲ
ಸಂತಸವೆಂದು ಅಚಲವಲ್ಲ
ನಮ್ಮಯ ಈ ಬಾಳು ಬರೀ ಗೋಳಲ್ಲ…

೩) ಭಾರವಾದ ಬದುಕು

ಭಾರವಾಗುತ್ತಿದೆ ನಮ್ಮ ಸುಂದರವಾದ ಬದುಕು
ಹತ್ತಿರವಾಗುತ್ತಿದೆ ದು:ಖ ದುಮ್ಮಾನಗಳ ಸರಕು…

ಬದುಕು ಹರಿದರೂ ಮರೆಯಾಗುತ್ತಿಲ್ಲ ಥಳಕು
ಮೂಗು ತೂರಿಸುತ್ತಿದೆ ಸಂಕಷ್ಟದ ಮಿನುಕು…

ಏನಾದರೂ ನೀ ಕಾಣು ಧೈರ್ಯದ ಬೆಳಕು
ಬಿಟ್ಟು ಬಿಡು ನಿನ್ನ ಆಡಂಬರದ ಹುಳುಕು…

ಕೆಟ್ಟ ಕೆಲಸಕ್ಕೆ ನೀ ಕೊಡ್ಬೇಡ ಕುಮ್ಮಕ್ಕು
ಸ್ವಲ್ಪ ಕಮ್ಮಿ ಮಾಡ್ಕೋ ನಿನ್ನ ಆ ಧೀಮಾಕು…

ನೀ ತೊಳೆದುಕೋ ನಿನ್ನ ಮನದ ಕೊಳಕು
ಸೋಲಿನಲ್ಲೂ ಗೆಲುವಿನ ದಾರಿಯ ಹುಡುಕು…

ಯಶಸ್ಸಿನ ಕಲ್ಲಾಸಿಗೆಗೆ ನಿನ್ನ ಮನವ ನೂಕು
ದುರಾಸೆಗೆ ಹೇಳು “ಬೇಡಪ್ಪ ಸಾಕು”…

ಭವಿಷ್ಯದ ಬಾವಿಗೆ ನೀ ಯೋಚಿಸಿ ಇಣುಕು
ಆಗಲೇ ನೋಡು ನಿನ್ನದು ನೆಮ್ಮದಿಯ ಬದುಕು…

೪) ಮನುಜ ಮತದ ಹೂಬುಟ್ಟಿ

ನಿಮ್ಮ ಮನಬಂಧ ಮುಕ್ತವಾಗಲಿ
ಅಹಂಕಾರದ ಕದ ತಟ್ಟಿ…
ನಿಮ್ಮ ಮನ ಮಿನುಗುತಿರಲಿ
ದುರಾಸೆಯ ಕುದುರೆ ಕಟ್ಟಿ…

ನಿಮ್ಮ ಮನ ಬೆಳಗುತಿರಲಿ
ಪ್ರೀತಿ ಅಂತ:ಕರಣ ಹುಟ್ಟಿ
ನಿಮ್ಮ ಮನ ನಗುತಿರಲಿ
ರಾಗದ್ವೇಷಗಳ ನೆತ್ತಿ ಕುಟ್ಟಿ…

ನಿಮ್ಮ ಮನ ಮೆರೆಯುತಿರಲಿ
ಅಮಾನವೀಯತೆ ದೈತ್ಯನ ಮೆಟ್ಟಿ
ನಿಮ್ಮ ಮನವಾಗದಿರಲಿ
ಸ್ವಾರ್ಥ ತುಂಬಿದ ಕಸದ ತೊಟ್ಟಿ…
ನಿಮ್ಮ ಮನ ಹಸನಾಗಲಿ
ಉದಯವಾಗಿ ಮನುಜಮತದ ಹೂಬುಟ್ಟಿ…

19) ಸೋತ ಪ್ರೇಮಿಯ 5 ವಿರಹಗೀತೆಗಳು – Sad love poems in kannada

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

೧) ಮರೆಯನು

ಬದುಕುತ್ತಲೇ ಸಾಯುವೆನು
ಸಾಯುತ್ತಲೇ ಬದುಕುವೆನು
ಏನಾದರೂ ನಿನ್ನ ಮಾತ್ರ
ನಾನೆಂದು ಮರೆಯನು.
ಪ್ರೀತಿಗೇಂದು ಸಾವಿಲ್ಲ
ನನ್ನ ಪ್ರೀತಿಗೆ ಕೊನೆಯಿಲ್ಲ…

ನಗುತ್ತಲೇ ಅಳುವೆನು
ಅಳುತ್ತಲೇ ನಗುವೆನು
ಏನಾದರೂ ನಿನ್ನ ಮಾತ್ರ
ನಾನೆಂದು ಅಗಲೆನು…
ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ
ನನ್ನ ಪ್ರೀತಿಗೆ ನೀನೇ ಎಲ್ಲ…

೨) ಪ್ರೇಮಪೂಜೆ

ಕನಸ ಕಾಣುವ ಕಂಗಳೆ
ಈಗ ಕುರುಡಾಗಿವೆ…
ಮಾತಾಡುವ ತುಟಿಗಳೆ
ಈಗ ಮೌನ ತಾಳಿವೆ…

ಈ ಹೃದಯವೀಗ ಒಡೆದು
ಚೂರು ಚೂರಾಗಿದೆ.
ಅದೇ ಚೂರಾದ ಹೃದಯದಲ್ಲಿ
ನಿನ್ನ ಸಾವಿರ ನೆನಪುಗಳಿವೆ…

ನಿನ್ನ ಪ್ರೀತಿಯ ಸಂಜೀವಿನಿ
ಸಿಗದೇ ಕನಸುಗಳು ಸಾವನ್ನಪ್ಪಿವೆ.
ಮತ್ತೆ ಈ ಮನದಲ್ಲಿ ಪ್ರೇಮಪೂಜೆ
ಪ್ರಾರಂಭವಾಗಲು ನಿನ್ನ ಪ್ರೀತಿಯ
ಮುಗುಳ್ನಗೆಯೊಂದು ಸಾಕಲ್ಲವೇ…?

೩) ಮಸಣದ ಹೂವು

ಲೇಖನಿ ಕೊರಗುತಿದೆ
ನಯನ ಹುಡುಕುತಿದೆ
ಈ ಮನ ನಿನ್ನನ್ನೇ ಬಯಸುತಿದೆ…

ಕೆಂದಾವರೆ ಬಾಡುತಿದೆ
ಮಂದಹಾಸ ಮರಗುತಿದೆ
ಈ ಜೀವ ನಿನ್ನನ್ನೇ ಅರಸುತಿದೆ…

ಕಣ್ಣೀರು ಕಾಡುತಿದೆ
ಕನಸು ತಣ್ಣೀರೆರೆಚಿದೆ
ಈ ಮನ ನಿನ್ನನ್ನೇ ನೆನೆದಿದೆ…

ಮನಸು ಮಸಣವಾಗಿದೆ
ಪ್ರೀತಿ ಮಸಣದ ಹೂವಾಗಿದೆ
ಆದರೂ ನನ್ನ ಹುಚ್ಚು ಮನ
ನಿನ್ನನ್ನೇ ಹುಡುಕುತಿದೆ….

೪) ಕಾಣೆಯಾದ ಕನಸು

ನಾ ಬಯಸಿದ ಸ್ನೇಹದ ಎರವಲು
ಈಗಾಗಿದೆ ಹುಚ್ಚುಪ್ರೀತಿಗೆ ಉರುವಲು
ಬೇಲಿ ಕಳಚಿದೆ ಗೆಳೆತನದ ಕಾವಲು
ಹಿಂಜರಿಯುತಿದೆ ಹಗೆತನ ಸಾಯಲು…

ಹೊಗೆಯಾಡಿದೆ ಹಗೆತನ ಸ್ನೇಹದಲಿ
ಮರೆಯಾಗಿದೆ ಗೆಳೆತನ ಮನದಲಿ
ಚಿಮ್ಮಿದೆ ರಾಗದ್ವೇಷ ಎದೆಯಲಿ
ಏನೋ ಕಾಣೆಯಾಗಿದೆ ಜೀವನದಲಿ….

೫) ಹೃದಯದ ಹಾಡು ;

ನಿನಗಾಗಿ ಹೃದಯದಲ್ಲೊಂದು ಹಾಡಿದೆ,
ಅದರ ಜೊತೆಗೊಂದು ಹೇಳದ ನೋವಿದೆ.
ನೀನಿಲ್ಲದ ಬಾಳು ಯಾರಿಗೆ ಬೇಕಿದೆ?

ಕಣ್ಣೀರು ಪದೇಪದೇ ಇಣುಕಿ ನೋಡಿ,
ಇದ್ದಬಿದ್ದ ಕನಸುಗಳನ್ನೆಲ್ಲ ಬಾಚಿಕೊಂಡಿದೆ.
ನನ್ನನ್ಯಾಕೆ ನೀ ವಿರಹದ ವಿಷದಲ್ಲಿ
ನೂಕಿ ಮುಂದೆ ಸಾಗಿದೆ?

ಪ್ರೀತಿಗೋಪುರದಿಂದ ಜಾರಿಬಿದ್ದ
ನನ್ನ ನೋಡಿ ಆಗಸ ಕಣ್ಣೀರಿಟ್ಟಿದೆ…
ಹುಚ್ಚನಂತೆ ನಾ ಅಲೆಯುವುದನ್ನು ಕಂಡ
ಚಂದ್ರನ ಕೊಂಕು ನಗು ನಿನಗೆ ಕೇಳಿಸದೆ..?

20) ಪ್ರೇಮಿಯೊಬ್ಬನ ಚರಣಗೀತೆ : Sad Love Poetry in Kannada – feeling kavana

ಹೃದಯವನ್ನು ತಣಿಸೆ ನನ್ನೊಂದಿಗೆ ಮಾತಾಡಿ
ಮರೆಯಾಗಿ ನೋಯಿಸದಿರು ನನ್ನನ್ನು ಕಾಡಿ
ಮಾತಾಡುವ ಬಾಯಿಗೆ ನೀನಾದೆ ಬೆಡಿ
ಕವಿತೆಗಳಿಂದ ತುಂಬಿದ ಮನದ ಜಾಡಿ…

ನಿನ್ನ ದೃಷ್ಟಿಯಲ್ಲಿ ನಾ ಹೇಗೆ ಕೇಡಿ?
ಯಾರು ಹೇಳಿದರು ನಿನಗೆ ನನ್ನ ಚಾಡಿ?
ಅತ್ತು ಕೆಂಪಾಗಿವೆ ಕಣ್ಣುಗಳು ಬಾಡಿ
ಸರಿಯಿಲ್ಲವೇನೆ ನಮ್ಮಿಬ್ಬರ ಪ್ರೇಮ ಜೋಡಿ?

ಬಾಳನ್ನೇ ಸುಡುತ್ತಿದೆ ನಿನ್ನ ಕೋಪದ ಕಿಡಿ
ಜಗವೇ ನಗುತ್ತಿದೆ ನನ್ನ ವ್ಯಥೆಯಾ ನೋಡಿ
ನಿನ್ನ ಮಡಿಲೇ ನನ್ನ ನಿದ್ರೆಗೆ ಜೋಪಡಿ
ಅದಕ್ಕಿರಲಿ ನಿನ್ನ ಪ್ರೀತಿಯ ಭದ್ರಗಡಿ…

ಕೆಟ್ಟ ಮಾತಿಗೆ ವೇದಿಕೆ ಊರ ಚಾವಡಿ
ಅಲ್ಲಿ ಕೇಳಿದೆಯೇನೆ ನನ್ನ ಲೇಬಡಿ?
ತಪ್ಪಿಲ್ಲದಿದ್ದರೂ ಬಾಗುವೆನು ನಿನ್ನ ಪಾದದಡಿ
ಕ್ಷಮಿಸೆಂದು ಕೇಳುವೆನು ದಯಮಾಡಿ….

ನೀನಿಲ್ಲದ ನಾನು ದೇವತೆಯಿಲ್ಲದ ಗುಡಿ
ನೀನಾಗದಿರು ಎನಗೆ ಬರೆಕೊಡುವ ಛಡಿ
ಸಂದೇಹವೇಕೆ ನೀನೇ ನನ್ನ ನರನಾಡಿ
ಮೆಚ್ಚಿಸಲೇ ನಿನ್ನ ಗುಣಗಾನ ಮಾಡಿ?

ಬೆನ್ನು ತಟ್ಟಿಕೊಳ್ಳುತ್ತಿದೆ ವಿಧಿ ಆಟವಾಡಿ
ನೊಂದ ಜೀವದ ಮೇಲೇಕೆ ನಿನ್ನ ಸಿಡಿಮಿಡಿ?
ಸಂತೈಸು ಸಂತಸದಿ ಪ್ರೇಮಗೀತೆ ಹಾಡಿ
ಇಲ್ಲವೇ ಬಿಳ್ಕೊಡು ದು:ಖದಿ ಚರಣಗೀತೆ ಹಾಡಿ….

21) ಸ್ನೇಹಾನಾ? ಪ್ರೀತಿನಾ? Kannada Love Poetry – Kannada Kavanagalu Friendship

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ನೂರಾರು ಹುಡುಗಿಯರ ನಡುವೆ
ನೀ ನನ್ನ ಸೆಳೆದಾಗ,
ನಾ ಸೇರಿದೆ ನಿನ್ನ ಸ್ನೇಹದ ಮಡಿಲು…
ನೀ ನನ್ನೊಂದಿಗೆ ಹೆಜ್ಜೆ ಹಾಕಿದಾಗ
ನಿನ್ನ ಸಂಬಂಧ ನನಗೆ ತಿಳಿಯದ ಕಡಲು…
ಈ ಸಂಬಂಧ ಪ್ರೀತಿಯಾಗಬಹುದು
ನೀ ನನ್ನ ಮನವೊಲಿಸಿ ಗೆಲ್ಲಲು…

ಅದೇ ಸಂಬಂಧ ಸ್ನೇಹವಾಗಬಹುದು
ನಾ ನಿನ್ನ ಆಸೆಯನ್ನು ಸೋಲಿಸಲು…
ನನ್ನ ಮಾತಿರದ ಮೌನ ನಿನಗೆ
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ…
ನಿನ್ನ ಪ್ರೀತಿ ಮುಗುಳ್ನಗು ನನ್ನೆದೆಯ
ಶಾಂತಸಾಗರದಲ್ಲಿ ಸುನಾಮಿ ಎದ್ದಂತೆ…

ನಾ ನಿನ್ನ ಗೆಳೆಯನಲ್ಲದ ಗೆಳೆಯ
ನನ್ನನೇಕೆ ಬಯಸುತಿದೆ ನಿನ್ನ ಹೃದಯ?
ನಿನಗೇ ಬಿಡುವೆನು ಈ ದ್ವಂದ್ವವನ್ನಾ
ನೀನೇ ನಿರ್ಧರಿಸು ಸ್ನೇಹಾನಾ? ಪ್ರೀತಿನಾ?

22) ಪ್ರೀತಿಸು ಇಲ್ಲವೇ ಸಾಯಿಸು.. Kannada Sad love Poetry

ನನ್ನ ಕನಸು, ಮನಸು ನೀನಾಗಿರುವಾಗ
ಏಕೆ ನಿನ್ನೀ ಹುಸಿ ಮುನಿಸು?
ರೆಪ್ಪೆ ಮುಚ್ಚಿದರೂ ನಿದ್ರೆ ಬಾರದಿರುವಾಗ
ನೀ ನನ್ನ ಕಣ್ಣಲ್ಲಿ ಬಂದು ವಿಶ್ರಮಿಸು…

ಮನದಲ್ಲಿ ವಿರಹ ನರ್ತಿಸುವಾಗ
ಪ್ರೀತಿಯಾಗಿ ನೀ ನನ್ನ ತಣಿಸು…
ಜೀವನವೇ ಹೊತ್ತಿ ಉರಿಯುವಾಗ
ಕೋಪಬಿಟ್ಟು ಬೇಗನೇ ಬಂದು ಓಲೈಸು…

ಹಸಿವಿದ್ದರೂ ಊಟ ಸೇರದಿರುವಾಗ
ಪಂಚಾಮೃತವಾಗಿ ನೀ ನನ್ನ ಉಣಿಸು…
ನಾ ದಾರಿತಪ್ಪುವ ಮೊದಲೇ
ನನ್ನ ದುಶ್ಚಟಗಳನ್ನೆಲ್ಲ ನೀ ಮರೆಸು…

ಮನದಾಳದಲ್ಲಿ ಪ್ರೀತಿಕೂಸು ಅಳುವಾಗ
ನೀ ಪ್ರೇಯಸಿಯಾಗಿ ಸಂತೈಸು…
ನನ್ನ ಜೀವಕ್ಕೆ ನೀನೇ ಉಸಿರಾಗಿರುವಾಗ
ನನ್ನ ಪ್ರೀತಿಯನ್ನು ನೀ ದಯಮಾಡಿ ಉಳಿಸು…

ನನ್ನ ಬದುಕಿಗೆ ನೀ ಸ್ಪೂರ್ತಿಯಾಗಿರುವಾಗ
ನನ್ನ ಕನಸ್ಸನ್ನು ನೀ ಮಾಡುವೆಯಾ ನನಸು?
ನಾ ಜೀವನದ ಜಾತ್ರೆ ಮುಗಿಸುವಾಗಲಾದರೂ
ನೀನೊಮ್ಮೆ ನನ್ನ ಪ್ರೀತಿಸು ಇಲ್ಲವೇ
ನೀನೇ ನನ್ನ ಬೇಗನೆ ಸಾಯಿಸು…

23) 3 ಪೋಲಿ ಪ್ರೇಮ ಕವನಗಳು – ಕನ್ನಡ ಕವನಗಳು – Love Poems In Kannada – Kannada Kavanagalu

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

೧) ಮದುವೆ ಗಂಟಿನ ಕಗ್ಗಂಟು :

ಕತ್ತೆಗೇನು ಗೊತ್ತು
ಕಸ್ತೂರಿಯ ವಾಸನೆ?
ನಮ್ಮಪ್ಪನಿಗೇನು ಗೊತ್ತು
ನನ್ನ ಮನೋಕಾಮನೆ..
ನಮ್ಮ ಬೀದಿಯಲ್ಲೇ ಇದೆ
ನನ್ನ ಪ್ರೇಯಸಿಯ ಮನೆ
ಹೋಗುವೆನು ನಾ ಆ ಕಡೆಗೆ
ಸುಮ್ಮ-ಸುಮ್ಮನೆ…

ಅವಳು ನನಗೆ ಸಹಪಾಠಿ
ಓದಿನಲ್ಲಿ ಬಲುಚೂಟಿ
ಎಲ್ಲರನ್ನೂ ನಾಚಿಸುವಂತಿದೆ
ಅವಳ ಬ್ಯೂಟಿ…. ಆದರೆ
ಅವಳು ಕಾಲ ಕೆದರಿ ಜಗಳಕ್ಕೆ
ಬರೋ ದೊಡ್ಡ ಜಗಳಗಂಟಿ..
ತಮಾಷೆಗೆಂದು ನಿಂತರೆ
ಕಾಲೆಳುವ ತುಂಟಿ…

ನಾವಿಬ್ಬರೂ ಪ್ರೀತಿಸಲು ಶುರುಮಾಡಿ
ಆಯ್ತು ಒಂದು ವರುಷ
ನಮ್ಮ ಪ್ರೀತಿ ಮೇಲೇಕೆ
ಅವಳಪ್ಪನ ಮಹಾಪೌರುಷ?
ಇಬ್ಬರಿಗೂ ಭವಿಷ್ಯವುಂಟು,
ಗುಣವುಂಟು, ಹಣವುಂಟು
ನನಗಾಗಿದೆ 21, ಅವಳಿಗೂ
ಹದಿನೆಂಟು ದಾಟಿದುಂಟು…
ನಮ್ಮಿಬ್ಬರಿಗೆ ಮದುವೆಯ ಗಂಟಾಗಿದರೆ
ಹೋಗುವುದಾ ಇವರ ಅಜ್ಜಿಗಂಟು…??

೨) ಕನ್ಯೆ V/S ಸೊನ್ನೆ

ಆಕೆ ಸೌಂದರ್ಯಲೋಕದ ಕನ್ಯೆ
ಅವಳದು ಊರ್ವಶಿಯ ಕೆನ್ನೆ…

ಅಪ್ಸರೆಯಂತೆ ಸಿಕ್ಕಳು ಮೊನ್ನೆ
ಅರಿಯದೇ ಪ್ರೀತಿಯಲಿ ಬಿದ್ದೆ ನಿನ್ನೆ…

ನಗುವಿನಲಿ ಸಂದೇಶ ಕಳಿಸಿದೆ ಸುಮ್ನೆ
ಸನ್ಮತಿ ಸೂಚಿಸಿತು ಅವಳ ಕಣ್ಸನ್ನೆ…

ಆಕೆ ನನ್ನ ಕೈಹಿಡಿದಾಗ ಮರೆಯಾಯ್ತು
ನನ್ನ ಬಾಳಲ್ಲಿದ್ದ ಏಕಾಂಗಿಯೆಂಬ ದೊಡ್ಡ ಸೊನ್ನೆ….

೩) ಹುಚ್ಚು ಹರಕೆ

ಓ ದೇವರೆ ನಮ್ಮನ್ನು ಬೈಯ್ಯುವ
ಮೇಷ್ಟ್ರಿಗೆ ಓಸಿಯಾದ್ರು ಬುದ್ಧಿ ಕೊಡು…
ನಮಗೆಲ್ಲ ಕ್ಲಾಸಲ್ಲಿ ಸುಮ್ನೆ ಕೂಡಲು
ಸ್ವಲ್ಪ ಜಾಸ್ತಿನೇ ಶಕ್ತಿಕೊಡು…

ಕ್ಲಾಸಿನ ಸಮಯವನ್ನು
ಬೇಗಬೇಗನೆ ಓಡಿಸು…
ದಿನಾ ಕಾಲೇಜಿಗೆ ಹೋಗುವಂತೆ
ಭಯಭಕ್ತಿ ಹುಟ್ಟಿಸು…

ಕೆಲ ಗುರುಗಳ ಅರ್ಥವಾಗದ
ಕೊರೆಯುವ ಪಾಠಗಳನ್ನು ತಪ್ಪಿಸು…
ನಮಗೆ ಅರ್ಥವಾಗುವಂತೆ ಒಳ್ಳೆ
ಗುರುಗಳಿಂದ ಪಾಠ ಹೇಳಿಸು…

ಪರೀಕ್ಷೆ ಹತ್ರ ಬಂದಿದೆ
ಕಾಫಿಗಳ ರಕ್ಷೆಗೆ ದಾರಿ ತೋರಿಸು..
ಭಯವನ್ನು ದೂಡಿಸಿ ಹೇಗಾದರೂ ಮಾಡಿ
ನಮ್ಮನ್ನು ಜಸ್ಟ್ ಪಾಸ್ ಮಾಡಿಸು…

ನಾವು ಏನೇ ಮಾಡಿದರೂ
ಎಲ್ಲರ ಬೆಂಬಲವನ್ನು ನಮಗೇ ಕೊಡಿಸು…
ನಮ್ಮ ಗುರುಗಳಿಗೆ ನಮ್ಮ ಕಾಟವನ್ನು
ಸಹಿಸುವ ಶಕ್ತಿ ಕರುಣಿಸು…

ನಮ್ಮಿಂದ ಏನಾದರೂ ತಪ್ಪಾಗದಿದ್ದರೇ
ದಯಮಾಡಿ ನಮ್ಮನ್ನು ಕ್ಷಮಿಸು …
ನಾವು ಎಲ್ಲರಂತೆ ಚೆನ್ನಾಗಿ ಓದಿ
ಉದ್ಧಾರವಾಗುವಂತೆ ನಮ್ಮನ್ನು ಹರಸು…..

24) ಪ್ರೇತಾತ್ಮದ ಪ್ರೇಮ ವೇದನೆ….. Kannada Virah Geetegalu – Sad Love Kavan

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಗೆದ್ದ ಪ್ರೇಮಕಥೆಗಳಿಗಿಂತ ಬಿದ್ದ ಪ್ರೇಮಕಥೆಗಳೇ ಹೆಚ್ಚಾಗಿ ಕಿವಿಗೆ ಬೀಳುತ್ತವೆ. ಪ್ರೀತಿ ಶುರುವಾಗಲು ಹಾಗೂ ಮುರಿದು ಬೀಳಲು ಕಾರಣಗಳು ಬೇಕಿಲ್ಲ. ಹೀಗೆ ಒಂದಿನ ಹುಡುಗರ ನೆಮ್ಮದಿ ಕೇಂದ್ರ ಬಾರಗೆ ಹೋಗಿದ್ದಾಗ ಒಬ್ಬ ಕುಡುಕನ ಮುರಿದ ಪ್ರೇಮಕಥೆ ಕಿವಿಗೆ ಬಿತ್ತು. ಅದನ್ನೆ ಚಿಕ್ಕದಾಗಿ ಒಂದು ಕವನದಲ್ಲಿ ವ್ಯಕ್ತಪಡಿಸಿದ್ದೇನೆ. ಇಷ್ಟ ಆದರೆ ಲೈಕ್ ಮತ್ತು ಶೇರ್ ಮಾಡಿ.

ನೀನಾಗೆ ಬಂದು ಪ್ರೀತಿಸುತ್ತೇನೆಂದಾಗ
ನನ್ನ ಹೃದಯವನ್ನೇ ಕೊಟ್ಟೆ……..

ನೀ ನನ್ನ ಜೀವನಕ್ಕೆ ರಾಣಿಯಾಗುತ್ತೇನೆಂದಾಗ
ಯೋಚ್ನೆ ಮಾಡದೆ ಜೀವನವನ್ನೇ ಅರ್ಪಿಸಿ ಬಿಟ್ಟೆ…

ಮೋಹಿಸಿದ ನೀನೇ ಮೋಸಮಾಡುತ್ತೇನೆಂದಾಗ
ಕಷ್ಟವಾದರೂ ನಿನ್ನ ನಗುನಗುತ್ತಾ ಬಿಟ್ಟುಕೊಟ್ಟೆ….

ಮತ್ತೊಬ್ಬನಿಗೆ ನೀ ಖುಷಿಯಿಂದ ಕೊರಳ ಚಾಚಿದಾಗ
ಕಣ್ತುಂಬಿ ಬಂದರೂ ನಿನ್ನ ಮದ್ವೇಲಿ ಖುಷಿಪಟ್ಟೆ….

ಇನ್ನೇನು ನೀ ಸತ್ತೇ ಹೋಗ್ತೀಯಾ ಅನ್ನೋವಾಗ
ನನ್ನೆರಡು ಕಿಡ್ನಿಗಳನ್ನು ಮಾರಿ ನಾ ಪ್ರಾಣ ಕೊಟ್ಟೆ…..

ಸಾವನ್ನು ಗೆದ್ದು ಮತ್ತೆ ನೀ ಬದುಕಿ ಬಂದಾಗ
ಪ್ರೇತಾತ್ಮವಾಗಿದ್ದ ನಾ ಸಂತಸದಿ ಕಣ್ಣೀರಿಟ್ಟೆ…..

ನಿನಗಾಗಿ ಹೃದಯವಲ್ಲದೇ ಜೀವನದ ಜೊತೆಗೆ
ಜೀವವನ್ನು ಕೊಟ್ಟ ನನಗೆ ನೀನೇನು ಕೊಟ್ಟೆ…???

25) ಗೆಳತಿ ನೀ ದೂರಾದಾಗ – Kannada Love Kavan

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಆಲಿಸು ಓ ಗೆಳತಿ
ನೀ ನನ್ನ ಮರೆತು ದೂರಾದಾಗ…
ಕಣ್ಣೀರಲ್ಲಿ ನೆನೆಯದಿರಲಿ
ನಿನ್ನ ಕಣ್ಣ ಕಾಡಿಗೆ…

ಕತ್ತಲು ಕವಿಯದಿರಲಿ ನಿನ್ನ
ಕಪ್ಪು ಕಣ್ಣುಗಳಿಗೆ…
ಕಂಬನಿ ಚುಂಬಿಸದಿರಲಿ
ನಿನ್ನ ಸೊಂಪಾದ ಕೆನ್ನೆಗಳಿಗೆ…

ಮಂದಹಾಸ ಮರೀಚಿಕೆಯಾಗದಿರಲಿ
ನಿನ್ನ ಕೆಂಪಾದ ತುಟಿಗಳಿಗೆ…
ಕಣ್ಣೀರು ಬಾಡೆಂದು ಹೇಳದಿರಲಿ
ನಿನ್ನ ಹೊಳೆಯುವ ಮುಖಕಾಂತಿಗೆ…

ಕಂಬನಿ ಇಬ್ಬನಿಯಾಗದಿರಲಿ
ನಿನ್ನ ವಜ್ರದ ಹರಳಿನ ಮೂಗುತಿಗೆ…
ಅಳುವಿನ ಸಿಡಿಲು ಬಡೆಯದಿರಲಿ
ಸವಿಮಾತನ್ನಾಡುವ ನಿನ್ನ ಬಾಯಿಗೆ…

ಶೋಕ ಸಮಾಚಾರ ತಲುಪದಿರಲಿ
ಸಂಗೀತ ಕೇಳುವ ನಿನ್ನ ಕಿವಿಗೆ…
ಕಾರ್ಮೋಡ ಸೆಳೆಯದಿರಲಿ
ನಿನ್ನ ಸುಂದರ ಕೇಶರಾಶಿಗೆ…

ಬಾಡುವ ಯೋಚನೆ ಬರದಿರಲಿ
ನಿನ್ನ ಮುಡಿಯ ಹೂವಿಗೆ…
ನಾನಿಲ್ಲದೇ ಮರೆಯಾಗದಿರಲಿ
ನಿನ್ನ ಹಣೆಯ ಬಿಂದುಗೆ…

ವಿರಹದ ಬೇಗೆ ತಾಗದಿರಲಿ
ನಾ ಕೊಟ್ಟ ಬೆರಳ ಉಂಗುರಿಗೆ…
ಒಂಟಿತನದ ವೇದನೆ ಕಾಡದಿರಲಿ
ನಿನ್ನ ಕೈಬಳೆಗೆ…

ಹೆಣಕ್ಕೆ ಹೊದಿಸಿದ ಬಟ್ಟೆಯೆಂಬ
ಭಾವನೆ ಬರದಿರಲಿ ನೀನುಟ್ಟ ಸೀರೆಗೆ…
ತಟಸ್ಥವಾಗಿರುವ ಸ್ಥಿತಿ ಬರದಿರಲಿ
ನಿನ್ನ ಕಿವಿಯೊಲೆಗೆ…

ಮೌನ ಆವರಿಸದಿರಲಿ
ಸದ್ದು ಮಾಡುವ ನಿನ್ನ ಕಾಲ್ಗೆಜ್ಜೆಗೆ…
ಓಡಿಹೋಗುವ ಮನಸ್ಸಾಗದಿರಲಿ
ನಾ ಕಟ್ಟಬೇಕೆಂದಿರುವ ತಾಳಿಗೆ…

ಸಾಯುವ ಚಿಂತೆ ಬರದಿರಲಿ
ನಾ ಕೊಟ್ಟ ಬೆಳ್ಳಿ ಕಾಲುಂಗುರಿಗೆ…
ಕಲ್ಲುಹೃದಯವೆಂಬ ಕೆಟ್ಟ ಹೆಸರು
ಬಾರದಿರಲಿ ನಿನ್ನೆದೆ ಗೂಡಿಗೆ…
ನೀನಿಲ್ಲದೆ ಕೊರಗಿ ನಿಲ್ಲದಿರಲಿ
ನನ್ನೆದೆ ಗುಂಡಿಗೆ….

26) ಕೇಳು ಓ ಮನಸ್ಸೇ … – Kelu o Manase Kannada Kavan

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಮುರಿದ ಮನಸ್ಸಲ್ಲಿ ಹೇಳಿಕೊಳ್ಳಲಾಗದಷ್ಟು ಮಾತುಗಳು ಮೌನವಾಗಿ ಚುಚ್ಚುತ್ತಿರುತ್ತವೆ. ಮುರಿದ ಮನಸ್ಸು ಸಹ ಒಂದು ರೀತಿಯ ಅಂಗವೈಕಲ್ಯವೇ ಸರಿ. ಇಷ್ಟಪಟ್ಟವರನ್ನು ಕಷ್ಟಪಟ್ಟು ಮರೆಯುವುದು ಸುಲಭದ ಮಾತಲ್ಲ. ಆದರೆ ಅದು ಅಸಾಧ್ಯವಲ್ಲ. ಮುರಿದ ಮನಸ್ಸುಗಳಿಗೆ ಸಾಂತ್ವನ ಹೇಳಲು ಈ ಚಿಕ್ಕ ಕವನ….

ಓ ಮನಸ್ಸೇ, ಮೋಸಹೋದ ಮನಸ್ಸೇ
ಇದೇನು ನಿನ್ನ ಹೊಸದಾದ ವರಸೆ?
ನಿನಗಿಲ್ಲವೇ ನಿನ್ನ ಮೇಲೆ ಭರವಸೆ?
ಯಾಕೆ ಬರಡಾಯ್ತು ನಿನ್ನ ಕನಸ್ಸುಗಳ ಕಿಸೆ?

ಓ ಮನಸ್ಸೇ, ನೀ ಕಾಣುವುದು ಬರೀ ಕನಸೇ?
ಮರೆಯಲೇಬೇಕು ನೀ ಅವಳಿಂದಾದ ಜಿಗುಪ್ಸೆ.
ನೋವಿಗೆ ಹೆದರಿ ಹೋಗದಿರು ವಲಸೆ
ಯೋಗ್ಯತೆ ಪ್ರಶ್ನಿಸಿದವಳಿಂದ
ಪಡೆಯಬೇಕು ನೀ ಪ್ರಶಂಸೆ…

ಓ ಮನಸ್ಸೇ, ನಿನ್ನದು ಬರೀ ಸರ್ಕಸ್ಸೇ?
ಯಾವಾಗ ನಾಂದಿ ಹಾಡುತ್ತೆ ನಿನ್ನ ಈ ಸಮಸ್ಯೆ?
ಸಿಗದವಳ ಪ್ರೀತಿ ನಿನಗೊಂದು ವರ್ಚಸ್ಸೇ?
ಕೆಚ್ಚದೆಯಿಂದ ಬೀಡು ನಿನ್ನ ಸಪ್ತ ವ್ಯಸೆ

ಓ ಮನಸ್ಸೇ, ಅವಳಾಗಲ್ಲ
ನಿನ್ನ ಮನೆಮನದ ಸದಸ್ಯೆ,
ಕಣ್ಣೀರಿನ ಶಾಖಕ್ಕೆ ಕೆನ್ನೆ ಬಿಸಿಯಾದರೂ
ಮಣ್ಣಾಗಲಿಲ್ಲವೇ ನಿನ್ನ ಮೀಸೆ ?
ಯಾಕೆ ಬೇಕು ನಿನಗೆ ವಿರಹದ ವೀರಗಾಸೆ?
ದೂರಾದವಳನ್ನು ಮರೆತು
ಮುಗಿಸು ನಿನ್ನ ಅಮವಾಸ್ಯೆ……..

27) ಓ ಪ್ರೀತಿಯೇ ನೀ ಅಮರವೇ ? – Kannada Sad Love Poem – ಕನ್ನಡ ವಿರಹ ಕವನ

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಓ ಪ್ರೀತಿಯೇ ನೀ ಅಮರವೇ?
ನನ್ನ ಹೃದಯದೊಡನೆ ನಿನ್ನ ಸಮರವೇ?
ಪ್ರಿಯೆಯೆಂಬ ಕೋಗಿಲೆಗೆ ನೀ ಮಾಮರವೇ?
ನನ್ನ ಮನಕುಟೀರದಲ್ಲಿ ನೀ ಚಾಮರವೇ?

ನನ್ನವಳ ಅಂತರಂಗ ನಿನ್ನಲ್ಲಿ ಪರಸ್ಪರ,
ಸಂಬಂಧದ ಹೊರನೋಟಕ್ಕೆ ನೀನೇ ಅಪಸ್ವರ.
ಬಂಧ ಬಂಧನವಾಗಲು ನಿನ್ನದೇ ಬಲುಕಾತುರ,
ಕೊಂಡಿ ಕಳಚಿದರೆ ನಿನ್ನದು ಬರೀ ಮರ್ಮರ…

ಪ್ರೀತಿ ನಿನಗಿಲ್ಲ ತಾನೇ ರೂಪ ಶರೀರ?
ನ್ಯಾಯವೇ ನಿನಗಾಗಿ ಹುಡುಗನ ಕಳೇಬರ?
ತಾರುಣ್ಯದ ಶಿಖರದಲ್ಲಿ ನಿನ್ನ ಸಿಹಿ ಶಿಬಿರ,
ಅವಸರದ ಮನದಲ್ಲಿ ನಿನ್ನದೇ ಸಡಗರ…

ಅವಳ ಜೊತೆಸಾಗಲು ನನಗೆ ಕಾತರ,
ನೀ ಎದೆ ಮೀಟಿದರೆ ಎಲ್ಲವೂ ಸುಂದರ.
ನಾ ಅವಳೊಡನೆ ಇದ್ದಾಗ
ನಿನ್ನ ನೆನಪು ಸಾವಿರ,
ಅವಳು ಮರೆಯಾದರೂ
ನೀನೇಕೆ ಅಜರಾಮರ?

28) ಕಳ್ಳನೋಟಗಳ ಕರಾಳ ನೆನಪುಗಳು : Respect Women and Save Women – ಕನ್ನಡ ಸಾಮಾಜಿಕ ಕವನ

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಕಾಮುಕರಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು,
ಪ್ರತಿಕ್ಷಣ ಅವಳು ಕಷ್ಟಪಡುತ್ತಿದ್ದಾಳೆ.

ಕಳ್ಳನೋಟಗಳನ್ನು ನೇರವಾಗಿ ಖಂಡಿಸಲಾಗದೆ
ಒಳಗೊಳಗೆ ಕೊರಗುತ್ತಿದ್ದಾಳೆ.

ಕಾಮದ ಕಣ್ಣುಗಳಿಗೆ
ಖಾರದ ಪುಡಿ ಎರೆಚಲು ಕಾಯುತ್ತಿದ್ದಾಳೆ…

ಕಳ್ಳನೋಟಗಳ ಕರಾಳ ನೆನಪುಗಳು
ಕನಸಾಗಿ ಅವಳನ್ನು ಕಾಡುತ್ತಿವೆ.

ನಿದ್ದೆಯಲ್ಲಿಯೂ ಹೆದರಿ
ಅವಳು ಬೆವರುತ್ತಿದ್ದಾಳೆ.
“ತನಗೆ ರಕ್ಷಣೆ ಎಲ್ಲಿದೆ ?”
ಎಂದು ಕನವರಿಸುತ್ತಿದ್ದಾಳೆ….

ಪ್ರತಿದಿನ ಪ್ರತಿಕ್ಷಣ ಅವಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾಳೆ. ಪ್ರತಿಯೊಂದು ಸ್ಥಳದಲ್ಲಿಯೂ ಅವಳು ಕಿರುಕುಳವನ್ನು ಎದುರಿಸುತ್ತಿದ್ದಾಳೆ. ಕೆಟ್ಟ ಕಣ್ಣುಗಳಿಂದ ನಿರ್ಮಾಣವಾದ ಉಸಿರುಗಟ್ಟಿಸುವ ವಾತಾವರಣ ಅವಳ ನಿದ್ದೆಗೆಡಿಸುತ್ತಿದೆ. ಅವಳಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ. ಅವಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವಳಿಗೆ ಬದುಕಲು ನಿರ್ಭಯವಾದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಗಳಲ್ಲಿ ಒಂದಾಗಿದೆ. ಜಗತ್ತು ಬದಲಾಗಬೇಕಾದರೆ ಬದಲಾವಣೆ ಮೊದಲು ನಮ್ಮಿಂದಲೇ ಶುರುವಾಗಬೇಕು. ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು. ಕಾಮದ ಕಳ್ಳನೋಟಗಳಿಗೆ ಕಡಿವಾಣ ಹಾಕಬೇಕು. ಯಾರೋ ಒಂದಿಬ್ಬರು ಮಾಡುವ ಕೆಟ್ಟ ಕೆಲಸಗಳಿಗೆ ಈಡೀ ಪುರುಷ ಕುಲವೇ ತಲೆ ತಗ್ಗಿಸುವಂತಾಗಿದೆ. ನಾವು ಬದಲಾಗೋಣ, ಕೆಟ್ಟವರನ್ನು ಬದಲಾಯಿಸಲು ಸಾಧ್ಯವಿಲ್ಲವಾದರೆ, ಅವರಿಂದ ಒಳ್ಳೆಯವರನ್ನು ಸಾಧ್ಯವಾದಷ್ಟು ಕಾಪಾಡೋಣ. ಎಲ್ಲರನ್ನೂ ಗೌರವಿಸಿ. ಎಲ್ಲರನ್ನೂ ರಕ್ಷಿಸಿ…

29) ನನ್ನ ಸೌಂದರ್ಯ ನನಗೆ ಶಾಪವೇ? kannada Sad Poetry ಕನ್ನಡ ಕವನಗಳು

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ತಾಯಿಗೆ ಭಾರವಾಗಿ
ಮಡಿಲಿನಿಂದ ಜಾರಿಬಿದ್ದೆ,
ತಂದೆಗೆ ಬೇಡವಾಗಿ
ಮನೆಯಿಂದ ಬೀದಿಗೆ ಬಿದ್ದೆ….

ಭ್ರೂಣವಾಗಿರುವಾಗಲೇ ನನ್ನ ಕೊಲ್ಲಲೆತ್ನಿಸಿದರು
ಆದರೆ ಹೇಗೋ ದೈವಬಲದಿ ನಾ ಬದುಕಿ ಬಂದೆ.
ನನ್ನ ಮೇಲೆ ಎಲ್ಲರಿಗೂ ತಾತ್ಸಾರ,
ಹೆಣ್ಣು ಮಗು ಹುಣ್ಣೆಂಬ ಲೆಕ್ಕಾಚಾರ…

ಬೀದಿಯಲ್ಲಿ ಬಿದ್ದು ಬೆಳೆದೆ
ವಿಧಿಯನ್ನು ಗೆದ್ದು ಓದಿದೆ
ಕಾಮುಕರ ಕಣ್ತಪ್ಪಿಸಿ ಓಡಾಡಿದೆ
ಹಗಲೊತ್ತಿನಲ್ಲೆ ಕತ್ತಲನ್ನು ಕಂಡೆ…

ಶಾಲೆಯಲ್ಲಿ ಗುರುವಿನ ಕಣ್ಣು
ಆಶ್ರಮದಲ್ಲಿ ಪ್ರಭುವಿನ ಕಣ್ಣು
ನನ್ನ ಸೌಂದರ್ಯವೇ ನನಗೆ ಶಾಪ
ಯಾರ ಮೇಲೆ ತೀರಿಸಿಕೊಳ್ಳಲಿ ನನ್ನ ಕೋಪ ??

ಆವತ್ತು ನನ್ನ ಕೂಗಿಗೆ ಬೆಲೆಯಿರಲಿಲ್ಲ
ನನ್ನ ಕೊರಗಿಗೆ ಎಲ್ಲೆಯಿರಲಿಲ್ಲ
ಕಾಮದ ಬೇಗೆಗೆ ನನ್ನ ದೇಹ ದಹಿಸಿದರೂ
ಕಾಮುಕರ ಕಾಮದಾಹ ತೀರಲಿಲ್ಲ.

ಬದುಕುವ ಆಸೆಯಿದ್ದರೂ
ನನ್ನನ್ನು ಬದುಕಲು ಬಿಡಲಿಲ್ಲ
ನನಗಾದ ದ್ರೋಹಕ್ಕೆ ಪರಿಹಾರವಿಲ್ಲ
ನನಗೆ ನಿಮ್ಮ ಕ್ಯಾಂಡಲ್ ಮತ್ತು
ತೋರಿಕೆಯ ಮೊಸಳೆ ಕಣ್ಣೀರು ಬೇಕಿಲ್ಲ…

ಹೆಣ್ಣನ್ನು ಬರೀ ಕಾಮದ ಕಣ್ಣಿಂದ ಕಾಣ್ತಿರಲ್ಲ,
ಪ್ರೇಮದ ಕಣ್ಣಿಂದಲೂ ಕಾಣಬಹುದಲ್ಲ?
ನನ್ನಾತ್ಮಕ್ಕೆ ಶಾಂತಿ ಸಿಗುತ್ತಿಲ್ಲವಲ್ಲ?
ನಾ ಅಳಿದರೂ ನನ್ನ ಸೋದರಿಯರಿಗೆ
ಸುಭದ್ರ ರಕ್ಷಣೆ ಯಾಕಿಲ್ಲ?

ಹೆಣ್ಣಾಗಿ ಹುಟ್ಟಿದ್ದು ತಪ್ಪಾ?
ಅಥವಾ ಕುರುಡು ಕಾನೂನಿರುವ
ದೇಶದಲ್ಲಿ ಹುಟ್ಟಿದ್ದು ತಪ್ಪಾ?
ಇಲ್ಲವೇ ನನ್ನ ಸೌಂದರ್ಯವೇ
ನನಗೆ ಶಾಪವೇ ?????

30) ನಿನಗೆ ನೆನಪಿದೆಯಾ? Love kavana – Kavanagalu – Feeling kavana

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಮೊದಲ ಸಲ ನಮ್ಮಿಬರ ಕಣ್ಣುಗಳು ಮಿಲನವಾದಾಗ ನೀನು ನಾಚಿಕೊಂಡಿದ್ದು, ನನ್ನ ಮೊದಲ ನೋಟ ನಲುಮೆಯಾದಾಗ ನೀನು ನಕ್ಕಿದ್ದು, ನಮ್ಮ ಸ್ನೇಹ ಸಲುಗೆಯಾಗಿ ನೀನು ಸಿಕ್ಕಸಿಕ್ಕಲ್ಲೆಲ್ಲ ಸ್ಮೈಲ್ ಕೊಟ್ಟಿದ್ದು ನೆನಪಿದೆಯಾ?

ಪರಿಚಯವಿಲ್ಲದಿದ್ದರೂ ಫೇಸ್ಬುಕಲ್ಲಿ ಚಾಟ್ ಮಾಡಿದ್ದು, ವಾಟ್ಸಾಪಲ್ಲಿ ವಿಚಿತ್ರ ಇಮೋಜಿಗಳನ್ನು ಶೇರ ಮಾಡಿದ್ದು, ಅವಶ್ಯಕತೆ ಇಲ್ಲದಿದ್ದರೂ ಹಠ ಮಾಡಿ ಮೊಬೈಲ್ ನಂಬರ್ ಪಡೆದುಕೊಂಡಿದ್ದು, ನಿದ್ರೆಬಾರದೇ ಮಧ್ಯರಾತ್ರಿ ಮಿಸ್ಡಕಾಲ್ ಮಾಡಿದ್ದು, ಕಾರಣವಿಲ್ಲದೆ ಗಂಟೆಗಟ್ಟಲೇ ಮಾತಾಡಿದ್ದು, ಸಾವಿರಾರು ಪ್ರೇಮ ಸಂದೇಶಗಳನ್ನು ಕಳಿಸಿದ್ದು ನೆನಪಿದೆಯಾ?

ಕದ್ದುಮುಚ್ಚಿ ಕೈಕೈ ಹಿಡಿದು ಊರ ಸುತ್ತಿದ್ದು, ಬರ್ಥಡೇಗೆ ಸರ್ಪರೈಜ ಗಿಫ್ಟಗಳನ್ನು ಕೊಟ್ಟಿದ್ದು, ಸಣ್ಣಪುಟ್ಟ ಕಾರಣಗಳಿಗೆ ಕಿತ್ತಾಡಿ ಕ್ಯಾಂಡಲ್ ಲೈಟ್ ಡಿನ್ನರಲ್ಲಿ ಮತ್ತೆ ಒಂದಾಗಿದ್ದು ನೆನಪಿದೆಯಾ?

ಚಿಟ್ಟೆಗಳನ್ನು ನಾಚಿಸುವಂತೆ ಫ್ಲೈಯಿಂಗ್ ಕಿಸಗಳನ್ನು ಕೊಟ್ಟಿದ್ದು, ನನ್ನನ್ನು ನಿನ್ನ ಮಡಿಲಲ್ಲಿ ಮಲಗಿಸಿಕೊಂಡು ಮುದ್ದು ಮಾಡಿದ್ದು, ಸೆಲ್ಫಿ ನೆಪದಲ್ಲಿ ಸಮೀಪಕ್ಕೆ ಸೆಳೆದುಕೊಂಡಿದ್ದು, ಪೆದ್ದುಪೆದ್ದಾಗಿ ಆಡಿ ಮುದ್ದು ಮಾಡಿದ್ದು ನಿನಗೆ ನೆನಪಿದೆಯಾ?

ನಾನು ಎಡವಿದಾಗ ನಿನಗೆ ನೋವಾಗಿದ್ದು, ನಿನಗೆ ನೆಗಡಿಯಾದಾಗ ನಾನು ಸೀನಿದ್ದು ನೆನಪಿದೆಯಾ? ನೀನು ಕೊನೆಯ ಸಲ ನನ್ನನ್ನು ಮುದ್ದಿಸಿ ಮಾತನಾಡಿ ತಿರುಗಿ ನೋಡದೆ ಹೋಗುವಾಗ ನಾ ನಿನ್ನನ್ನು ಖುಷಿಯಿಂದ ಬಿಳ್ಕೊಟ್ಟು ಕಾಣದಂತೆ ಕಣ್ಣೀರಾಕಿದ್ದು ನಿನಗೆ ನೆನಪಿದೆಯಾ?

31) ಒಂದು ಕಾಲದಲ್ಲಿ – ಒಂದು ವಿರಹ ಕಾವ್ಯ – Kannada Sad Love Kavanagalu – Viraha Kavya

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಒಂದು ಕಾಲದಲ್ಲಿ ನಾ ಹುಚ್ಚನಂತೆ ನಿನ್ನ ಹಿಂದೆ ಸುತ್ತುತ್ತಿದ್ದೆ…

ಒಂದು ಕಾಲದಲ್ಲಿ ನಾ ನಿನ್ನ ಹುಚ್ಚನಂತೆ ಪ್ರೀತಿಸುತ್ತಿದ್ದೆ…

ಒಂದು ಕಾಲದಲ್ಲಿ ನಾ ನಿನ್ನೊಡನೆ ಮಾತನಾಡಲು ಹುಚ್ಚನಂತೆ ಕಾಯುತ್ತಿದ್ದೆ…

ಒಂದು ಕಾಲದಲ್ಲಿ ನಾ ನಿನ್ನ ಮುಗುಳ್ನಗೆಯನ್ನು ನೋಡಲು ಹುಚ್ಚನಂತೆ ಕಾತರಿಸುತ್ತಿದ್ದೆ…

ಒಂದು ಕಾಲದಲ್ಲಿ ನಾ ನಿನ್ನ ಪೋನ ಕರೆಗೆ, ಮುದ್ದಾದ ಮೆಸೇಜಗಳಿಗೆ ರಾತ್ರಿಯೆಲ್ಲ ಗೂಬೆಯಂತೆ ಕಾಯುತ್ತಿದ್ದೆ…

ಒಂದು ಕಾಲದಲ್ಲಿ ನಾನು ನಿನ್ನನ್ನು ಊರ ತುಂಬ ಸುತ್ತಾಡಿಸಲು ಬಾಡಿಗೆ ಬೈಕನ್ನು ಸಾಲ ಮಾಡಿ ತರುತ್ತಿದ್ದೆ…

ಒಂದು ಕಾಲದಲ್ಲಿ ನಾ ನಿನಗೆ ಚೂಡಿದಾರವನ್ನು ಕೊಡಿಸಲು ನನ್ನ ಬೆಳ್ಳಿ ಉಡದಾರವನ್ನು ಮಾರಿಕೊಂಡಿದ್ದೆ…

ಒಂದು ಕಾಲದಲ್ಲಿ ನಾ ನಿನಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೆ…

ಒಂದು ಕಾಲದಲ್ಲಿ ನಾ ನೀನಿಲ್ಲದೆ ಬದುಕಲಾರೆನು ಎಂದುಕೊಂಡಿದ್ದೆ…

ಒಂದು ಕಾಲದಲ್ಲಿ ನಾನು ನಿನಗಾಗಿ ತಲೆಕೆಡಿಸಿಕೊಂಡು ಕುಡುಕನಾಗಿದ್ದೆ…

ಒಂದು ಕಾಲದಲ್ಲಿ ನಾನು ನಿದ್ರೆಯಲ್ಲಿಯೂ ನಿದ್ರೆ ಬಾರದೆ ನಿನ್ನ ಹೆಸರನ್ನೇ ಕನವರಿಸುತ್ತಿದ್ದೆ…

ಒಂದು ಕಾಲದಲ್ಲಿ ನಾ, ಪ್ರೀತಿಸಿ ಮೋಸ ಮಾಡಿ ಹೋದ ನೀ ಮರಳಿ ಬರುವೆ ಎಂದು ನಿದ್ದೆಗೆಟ್ಟು ಕಾಯುತ್ತಿದ್ದೆ…

ಒಂದು ಕಾಲದಲ್ಲಿ ನಾ, ನೀ ಮರಳಿ ಬರಲ್ಲ ಎಂಬುದು ಗೊತ್ತಾದಾಗ ಆತ್ಮಹತ್ಯೆ ಮಾಡಿಕೊಂಡು ಸಾಯಲು ಮುಂದಾಗಿದ್ದೆ…

ಒಂದು ಕಾಲದಲ್ಲಿ ನಾ ನಿನ್ನನ್ನು ಅಪರಿಚಿತ ಊರಲ್ಲಿ ಬೀದಿಬೀದಿ ಹುಡುಕಾಡಿದ್ದೆ…

ಒಂದು ಕಾಲದಲ್ಲಿ ನಾ, ನೀನೇ ನನ್ನ ಸರ್ವಸ್ವ ಎಂದುಕೊಂಡು ಜೀವಂತ ಶವದಂತೆ ಬದುಕುತ್ತಿದ್ದೆ…

ಒಂದು ಕಾಲದಲ್ಲಿ ಯಾವಾಗ ನೀನು ನಾನಿಲ್ಲದೆ ನಗುತ್ತಿರುವೆ ಎಂಬುದು ಗೊತ್ತಾಯಿತೋ ನಾನು ಬದಲಾದೆ. ಮೋಸ ಮಾಡಿ ಹೋದ ನಿನ್ನನ್ನು ಮರೆತು ನಾನು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದೆ..

ಒಂದು ಕಾಲದಲ್ಲಿ ನಾ ನಿನ್ನನ್ನು ಬಿಟ್ಟು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದ್ದರಿಂದ ನನ್ನ ಬಳಿ ಎಲ್ಲವೂ ಇದೆ…

ಒಂದು ಕಾಲದಲ್ಲಿ ನೀನು ನನ್ನನ್ನು ಪ್ರೀತಿಸಿ ವಂಚಿಸಿ ಹೋದದ್ದರ ಫಲವಾಗಿ ನಾನು ಅರಮನೆಯಂಥ ಮನೆಯಲ್ಲಿರುವೆ. ಆದರೆ ನೀನಿನ್ನೂ ಅದೇ ಬಾಡಿಗೆ ಮನೆಯಲ್ಲಿ ಗಂಡನ ಗುಲಾಮಗಿರಿ ಮಾಡಿಕೊಂಡು ಬಿದ್ದಿರುವೆ…

ಒಂದು ಕಾಲದಲ್ಲಿ ನೀ ನನ್ನನ್ನು ಅಳಿಸಿ ತಿರುಗಿ ನೋಡದಂತೆ ಹೋಗಿದ್ದೆ. ಅದಕ್ಕೆ ನಾನಿಂದು ನೀನು ತಲೆಯೆತ್ತಿ ನೋಡುವಷ್ಟು ಎತ್ತರಕ್ಕೆ ಬೆಳೆದು ನಿಂತಿರುವೆ…

ಒಂದು ಕಾಲದಲ್ಲಿ ನಾ ನಿನ್ನ ಮೊಸಳೆ ಕಣ್ಣೀರಿಗೆ ಕರಗುತ್ತಿದ್ದೆ. ಆದರೆ ಈಗ ನೀ ನಿಜವಾಗಿಯೂ ಕಣ್ಣೀರಾಕಿದರೂ ನಾ ಕರಗಲಾರೆ…

ಒಂದು ಕಾಲದಲ್ಲಿ ನಿನಗಾಗಿ, ನಿನ್ನೊಂದಿಗೆ, ನಿನ್ನಿಂದ ಇನ್ನೂ ಏನೇನೋ ಆಗಿವೆ. ಅವುಗಳಿಗೆಲ್ಲ ಅನಂತ ಧನ್ಯವಾದಗಳು…

32) ಚಂದ್ರಬಿಂಬದಲ್ಲಿ ಪ್ರೇಮಕಹಾನಿ : Kannada Love Poem – ಕನ್ನಡ ಲವ್ ಕವನಗಳು

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಪಾಡ್ಯದ ಚಂದ್ರ ಪರನಂತೆ ಕಂಡಾಗ
ಎವೆಯಿಕ್ಕದೆ ಅವಳನ್ನು ಕಂಡೆ…
ಬಿದಿಗೆ ಚಂದ್ರ ಬೀದಿಯಲ್ಲಿ ಬಿದ್ದಾಗ
ಅವಳ ಸ್ನೇಹ ಬಯಸಿದೆ….

ತದಿಗೆ ಚಂದ್ರ ಶರದಿ ಸೇರಿದಾಗ
ಸ್ನೇಹದ ಪರಿಧಿ ಭರದಿ ಸಾಗಿದೆ…
ಚತುರ್ಥಿ ಚಂದ್ರ ಚಾಮರ ಸೂಸಿದಾಗ
ಪ್ರೇಮದಲೆಯ ಆಸರೆ ಅರಸಿದೆ….

ಪಂಚಮಿ ಚಂದ್ರ ಪಂಚಾಮೃತ ನೀಡಿದಾಗ
ನಾನವಳ ಪ್ರೀತಿಯಲ್ಲಿ ಬಿದ್ದೆ…
ಷಷ್ಠಿ ಚಂದ್ರ ಶುಭಮಸ್ತು ಎಂದಾಗ
ಪ್ರೀತಿ ಹೇಳಲು ಒದ್ದಾಡಿದೆ…

ಸಪ್ತಮಿ ಚಂದ್ರ ಸಾರಥಿಯಾದಾಗ
ನಾನವಳ ಹೃದಯದೆಡೆಗೆ ಸವಾರಿ ಮಾಡಿದೆ…
ಅಷ್ಟಮಿ ಚಂದ್ರ ಅಗ್ಗಿಷ್ಟಿಕೆ ನೀಡಿದಾಗ
ಅವಳ ಮನದಲ್ಲಿ ಪ್ರೀತಿಜ್ಯೋತಿ ಬೆಳಗಿದೆ…

ನವಮಿ ಚಂದ್ರ ನಗುಬೀರಿದಾಗ
ನನ್ನ ಅಶ್ರುಧಾರೆಯ ನಿಲ್ಲಿಸಿದಳಾಕೆ…
ದಶಮಿ ಚಂದ್ರ ದಶಾವತಾರ ತೋರಿದಾಗ
ನನ್ನ ಜೀವನಕ್ಕೆ ಕಾಲಿಟ್ಟಳಾಕೆ…

ಏಕಾದಶ ಚಂದ್ರ ಏಕಾಂತ ಸೂಸಿದಾಗ,
ಅವಳು ನನ್ನ ಪ್ರೀತಿಗೆ ಆತಂಕ ನೀಡಿದ್ದೇಕೆ?
ದ್ವಾದಶ ಚಂದ್ರ ದಿಢೀರನೆ ಅತ್ತಾಗ,
ನನ್ನನ್ನು ನಡು ನೀರಿನಲ್ಲಿ ಮುಳುಗಿಸಿದಳಾಕೆ…

ತ್ರಯೋದಶ ಚಂದ್ರ ಚಾರಿತ್ರ್ಯ ಬೋಧಿಸಿದಾಗ,
ಅವಳ ಚರಿತ್ರೆ ಮರೆಯಲು ಪ್ರಯತ್ನಿಸಿದೆ….
ಚತುರ್ಧಶ ಚಂದ್ರ ಬೆಳದಿಂಗಳ ಹುಣ್ಣಿಮೆ ಎಂದಾಗ
ಅವಳು ಕೊಟ್ಟ ಅಮವಾಸ್ಯೆಯನ್ನು ಮರೆತೆ….

33) ನನ್ನ ಬೆಸ್ಟ ಟೀಚರ್ಸ : My Best Teachers : Teachers Day Poem in Kannada

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ನನಗೆ ಬರೀ ಶಾಲೆಯಲ್ಲಿ ಎ, ಬಿ, ಸಿ, ಡಿ
ಕಲಿಸಿದವರು ಮಾತ್ರ ಗುರುಗಳಲ್ಲ…

ಕಷ್ಟದಲ್ಲಿದ್ದಾಗ ಇಷ್ಟಪಟ್ಟು ಸಹಾಯ ಮಾಡಿ,
ಹೆಗಲಿಗೆ ಹೆಗಲು ಕೊಟ್ಟ ನಿಂತ ಸ್ನೇಹಿತರು…

ಅಜ್ಞಾನವೆಂಬ ಕತ್ತಲೆಯಲ್ಲಿದ್ದಾಗ ಜ್ಞಾನದಾಹವನ್ನು
ನೀಗಿಸಿ ಬದುಕಿನ ದಾರಿಯನ್ನೇ ಬದಲಿಸಿದ ಹೊತ್ತಿಗೆಗಳು…

ನಡುದಾರಿಯಲ್ಲಿ ಅಳುತ್ತಾ ನಿಂತಿದ್ದಾಗ
ಕಣ್ಣೀರೊರಸಿ ಕೈತುತ್ತು ನೀಡಿದ ಕರುಣೆಯ ಕೈಗಳು…

ಜನ್ಮಕೊಟ್ಟು ಜಗತ್ತನ್ನು ಪರಿಚಯಿಸಿದ
ಪೂಜ್ಯ ತಂದೆತಾಯಿಗಳು…

ಹೊಟ್ಟೆಬಟ್ಟೆಗಿಲ್ಲದೆ, ಓದಿಗೆ ದುಡ್ಡಿಲ್ಲದೇ
ಅಲೆಯುತ್ತಿರುವಾಗ ಕರೆದು ಕೆಲಸ ಕೊಟ್ಟ ಮಹಾತ್ಮರು…

ತಪ್ಪು ಮಾಡಿದಾಗ ಪಶ್ಚಾತ್ತಾಪ ಪಡುವಂತೆ
ಮಾಡಿದ ಆತ್ಮಸಾಕ್ಷಿಯ ಅರಿವು…

ಮುಗುಳುನಗೆಯಲ್ಲಿ ಹಗೆಯ ಸಂಚನ್ನು ಮುಚ್ಚಿಟ್ಟು
ವಂಚಿಸಿದ ನಯವಂಚಕ ಸಮಯಸಾಧಕರು…

ಬದುಕೇ ಬೇಡವಾದಾಗ ಬದುಕಿಗೆ
ಸ್ಪೂರ್ತಿಯಾಗಿ ಬಂದ ಜೀವದ ಗೆಳತಿ…

ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವುದನ್ನು
ಕಲಿಸಿದ ಬರಿಬಾದ ಬದುಕು…

ಹೇಗೆ ಬದುಕಬೇಕು ಎಂಬುದನ್ನು
ತೋರಿಸಿಕೊಟ್ಟ ಮಹಾನ್ ಸಾಧಕರು…

ಹೀಗೆ ಎಲ್ಲರೂ ನನ್ನ ಪಾಲಿಗೆ ಬೆಲೆಕಟ್ಟಲಾಗದ
” ಬೆಸ್ಟ್ ಟೀಚರ್ಸ ” . ಏಕೆಂದರೆ
“ವರ್ಣಮಾತ್ರಂ ಕಲಿಸಿದಾತನೂ ಸಹ ಗುರು”

34) ಅನಾಥನ ಆತ್ಮವಿಶ್ವಾಸ – Kannada Short Poems – Inspirational Poetry in Kannada

” ನಾನು ಯಾವತ್ತೂ ತಾಯಿಯ
ಜೋಗುಳ ಕೇಳಿ ಮಲಗಲಿಲ್ಲ…

ಒಂದಿನಾನೂ ತಂದೆಯ
ಬೈಗುಳ ಕೇಳಿ ಎದ್ದೇಳಲಿಲ್ಲ…

ಏಕಾಂಗಿ ಜಗತ್ತಿನಲ್ಲಿ ನಾನೊಬ್ಬ ಅನಾಥ.
ಆದರೂ ನನಗೇನು ಬೇಜಾರಿಲ್ಲ…

ಸೂರಿಲ್ಲದೇ ಬೀದಿಯ ಮೇಲೆ
ಜೀವನ ಸಾಗಿಸೋರೆಲ್ಲ ನನ್ನ ಬಂಧುಗಳು …

ದಿಕ್ಕಿಲ್ಲದ ಅನಾಥರೆಲ್ಲ ನನ್ನ ಸೋದರರು…

ಮಾಡದ ತಪ್ಪಿಗೆ ಮರೆಯಲಾಗದ ಶಿಕ್ಷೆಗೆ
ಗುರಿಯಾದವರೇ ನನ್ನ ಸ್ನೇಹಿತರು …

ಹಸಿವಾದಾಗ ಕರೆದು ಕೈತುತ್ತು
ಕೊಟ್ಟವರೆಲ್ಲ ನನ್ನ ಸೋದರಿಯರು..

ನೊಂದವರೆಲ್ಲ ನನ್ನ ಆತ್ಮೀಯರು…

ಏನೋ ಪುಣ್ಯ ಮಾಡಿದೀರಿ. ಅದಕ್ಕೆ
ಆ ಪಾಪಿ ದೇವರು ನಿಮಗೆಲ್ಲಾ ಕೊಟ್ಟೌನೆ…

ಹೊಟ್ಟೆ ಹಸಿವು ನೀಗದಿದ್ದರೂ
ನನಗೆ ಜ್ಞಾನದ ಹಸಿವು ಸಾಕಷ್ಟು ನೀಗಿದೆ…

ನೊಂದವರ ನಗುವೇ ನನಗೆ ಸ್ಪೂರ್ತಿ…

ದೇವರ ಆರ್ಶೀವಾದವೇ ನನಗೆ ಶಕ್ತಿ…

ನಿಮ್ಮಂತೆ ನಾನು ಸಣ್ಣಪುಟ್ಟ
ಕಷ್ಟಗಳಿಗೆಲ್ಲ ಕುಗ್ಗಲ್ಲ…

ಹೇಡಿಯಂತೆ ನಾನು ಸಾಧಿಸದೆ ಸಾಯಲ್ಲ…

ನಾನು ಅನಾಥನೇ ಆದರೂ ನನಗೇನು ಬೇಜಾರಿಲ್ಲ.
ಯಾಕೇಂದರೆ ನನ್ನೊಂದಿಗೆ ದೇವರಿದ್ದಾನೆ…”

35) ಪ್ರೀತಿಗೆ ಕಣ್ಣಿಲ್ಲ. ಆದರೆ ಪ್ರೀತಿ ಕುರುಡಲ್ಲ… – ಪ್ರೇಮ ಕವನಗಳು – ಪ್ರೀತಿಯ ಕವನಗಳು

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

“ಈ ಪ್ರೀತಿ ಒಂದು ಮಹಾ ಕುರುಡು” ಎಂದರು
ಪ್ರೀತಿಗೆ ಮನಸಾರೆ ಮೋಸ ಮಾಡಿದವರು.
“ಪ್ರೀತಿಯಲ್ಲಿ ಬಿದ್ದರೆ ಬಾಳೇ ಬರಡು” ಎಂದರು
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕರು…

ರೋಮಿಯೋ-ಜ್ಯೂಲಿಯಟ್ ಸಾಯೋವಾಗ,
ಲೈಲಾ ಮಜನು ಲೋಕ ತ್ಯಜಿಸುವಾಗ,
ಪಾರುಗಾಗಿ ದೇವದಾಸ ಹುಚ್ಚನಾದಾಗ,
ಈ ಪ್ರೀತಿ ತನ್ನ ಅಕ್ಷಿಯನ್ನೇಕೆ ತೆರೆಯಲಿಲ್ಲ?
ಎಂದು ಕೇಳಿದರು ವಿರಹಿಗಳು…

“ಈ ಪ್ರೀತಿ ಒಂಥರಾ ಮಾಯಾಜಾಲವೇ?”
ಎಂದು ಪ್ರಶ್ನಿಸಿದರು ನವ ಪ್ರೇಮಿಗಳು.
“ಪ್ರೀತಿಗೆ ಮನಸ್ಸನ್ನು ಕೊಟ್ರೆ ಉಳಿಗಾಲವಿಲ್ಲ”
ಎಂದು ಹೆದರಿಸಿದರು ಭಗ್ನ ಪ್ರೇಮಿಗಳು…

ಪ್ರೀತಿಗೆ ಶರಣಾದೊಡೆ ಪ್ರೀತಿನೇ ಎಲ್ಲ,
ಪ್ರೀತಿ ಇರದಿದ್ದರೇ ಈ ಲೋಕವೇ ಇಲ್ಲ,
“ಪ್ರೀತಿಗೆ ಕಣ್ಣಿಲ್ಲ. ಆದರೆ ಪ್ರೀತಿ ಕುರುಡಲ್ಲ”.
ಕೇಳಿ ಪ್ರೇಮಿಗಳೇ ನನ್ನ ಮಾತು ಸುಳ್ಳಲ್ಲ…

36) ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು… Kannada Poems – Mother Poetry in Kannada

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ತಾಯಿ ಹಾಡಿದ ಜೋಗುಳದ ಗೀತೆ
ತಾಯಿ ಪ್ರೀತಿಯ ಮುಗಿಯದ ಕವಿತೆ
ತಾಯಿಯದ್ದು ಕರುಳು ಬಂಧದ ಮಮತೆ
ಅದನ್ಯಾಕೆ ನೀ ಮಡದಿ ಬಂದಾಗ ಮರೆತೆ?

ನವಮಾಸ ನಿನ್ನನ್ನು ಹೊತ್ತಳು
ನೀ ಹುಟ್ಟುವಾಗ ಸಂತಸದಿ ಅತ್ತಳು
ಜೀವತೆದು ನಿನ್ನ ಹೊಗಳಿ ಬೆಳೆಸಿದಳು
ನಿನಗಾಗಿ ವನವಾಸ ಅನುಭವಿಸಿದಳು..

ಓದಿಸಿದಳು ನಿನ್ನ ಹಗಲಿರುಳು ದುಡಿದು
ಮರುಗಿದಳು ದಿನಾ ಸಂಕಷ್ಟಗಳಲ್ಲಿ ಮಡಿದು
ನಿನ್ನ ಏಳ್ಗೆಗೆ ತಾಯಿ ಪಟ್ಟ ನೋವಿದು
ಇಂಥ ಮಾತೆಗೆ ಯಾವ ಉಡುಗೊರೆ ನಿನ್ನದು?

ನಿನ್ನ ಪ್ರೀತಿಗೆ ತಾಯಿ ಕೊಟ್ಟಳು ಒಪ್ಪಿಗೆ
ಬಂದ ಸೊಸೆ ಕಾಡುತಿಹಳು ಯಾವ ತಪ್ಪಿಗೆ?
ಜೀವ ಬಿಗಿಹಿಡಿದವಳೆ ಮೊಮ್ಮಕ್ಕಳ ಆಸೆಗೆ

ಮುದಿ ಮುದುಕಿ ಮೌನವಾಗಿರುವಳು
ನಿನ್ನ ಮುದ್ದಿನ ಮಡದಿಯ ಕಾಟಕ್ಕೆ.
ನೀನು ಹೋಗುವೆ ಖಂಡಿತ ನರಕಕ್ಕೆ…

ಸ್ವಾರ್ಥಿ ನಿನ್ನ ಹೆಂಡತಿ ತಾಯಿಯ ದೂಡಿದಳು
ಬೀದಿಲಿ ಬಿದ್ದ ತಾಯಿ ನಿನ್ನನ್ನೇ ಹರಸಿದಳು
ಕೊನೆಯುಸಿರೆಳೆದಳು ಸಿಗದೇ ಅನ್ನದಗಳು
ಈಗ ನೀ ಅತ್ತರೆ ತಾಯಿ ಮತ್ತೆ ಬಾರಳು…
ನೆನಪಿರಲಿ ತಾಯಿ ಮತ್ತೆ ಮರಳಿ ಬಾರಳು…

37) ವಿಧಿನಿಯಮ : Kannada Poetry : kannada kavanagalu about life

ಕನ್ನಡ ಕವನಗಳು - Kannada Kavanagalu - ಕನ್ನಡ ಪ್ರೇಮ ಕವನಗಳು

ಸೋಲನ್ನು ಸವಾಲಾಗಿ ಸ್ವೀಕರಿಸು
ಗೆಲುವನ್ನು ಬುನಾದಿಯಾಗಿ ಉಳಿಸು
ಸೋಲು ಗೆಲುವನ್ನು ಸಮನಾಗಿ ಅನುಭವಿಸು
ನಗುನಗುತ್ತಾ ನೀ ಜೀವನವಾ ಸಾಗಿಸು…

ಸತತ ಪರಿಶ್ರಮವೇ ಗೆಲುವಿನ ಗುಟ್ಟು
ಪ್ರಯತ್ನವಿರದ ಆಲಸ್ಯವೇ ಸೋಲಿನ ಹುಟ್ಟು
ಪ್ರಯತ್ನಗಳಿಂದ ಎದೆಬಾಗಿಲನ್ನು ತಟ್ಟು
ಆತ್ಮವಿಶ್ವಾಸದಿಂದ ಸೋಲನ್ನು ಹಿಮ್ಮೆಟ್ಟು…

ಸೋತವನಿಗೆ ಗೆಲ್ಲುವ ಛಲಬೇಕು
ಗೆದ್ದವನ ಕಾಲು ನೆಲ ತಾಗಿರಬೇಕು
ಸೋತವನಿಗೆ ಸಹನೆ ಬೇಕು
ಗೆದ್ದವನಿಗೆ ಸಂಯಮ ಇರಬೇಕು…

ಸೋತ ಮನಸ್ಸಿಗೆ ತಾನೇ
ಗೆಲ್ಲುವ ಛಲವಿರುವುದು?
ಗೆಲ್ಲದ ಮನಸ್ಸಿಗೆ ತಾನೇ
ಸೋಲುವ ಭಯ ಕಾಡುವುದು…?

ಸೋತ ಮನಸ್ಸು ಗೆಲ್ಲಲೇಬೇಕು.
ಗೆದ್ದ ಮನಸ್ಸು ಒಮ್ಮೆಯಾದರೂ,
ಯಾರಿಗಾದರೂ ಸೋಲಲೇಬೇಕು
ಇದು ವಿಧಿ ನಿಯಮ ತಾನೇ…?

To Be Continued….

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/(Director Satishkumar) ಲೈಕ್ ಮಾಡಿ.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books