9 ಸುರಸುಂದರಿಯರು : 9 Beautiful Women from Ramayana and Maha Bharat in Kannada

You are currently viewing 9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಯಾರಾದರೂ ನನಗೆ “ನಿನ್ನ ಫೇವರೆಟ್ ಬುಕ್ಸ್ ಯಾವುವು?” ಎಂದು ಕೇಳಿದರೆ ನಾನು ಒಂದು ಕ್ಷಣವೂ ಯೋಚಿಸದೆ ರಾಮಾಯಣ ಮತ್ತು ಮಹಾಭಾರತವೆಂದು ಹೇಳುತ್ತೇನೆ. ಏಕೆಂದರೆ ರಾಮಾಯಣ, ಮಹಾಭಾರತಗಳು ಅತ್ಯಂತ ರೋಚಕವಾದ ಕಥಾ ಹಂದರವನ್ನು ಹೊಂದಿವೆ. ಅವುಗಳನ್ನು ಎಷ್ಟು ಸಲ ಓದಿದರೂ ಬೋರಾಗುವುದಿಲ್ಲ. ಅಲ್ಲದೇ ಅವುಗಳನ್ನು ಪ್ರತಿಸಲ ಓದಿದಾಗ ನಮ್ಮ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿಸಲ ಬೇರೆ ಬೇರೆ ವಿಚಾರಧಾರೆಗಳು ನಮ್ಮ ಮೆದುಳಿನಿಂದ ಹೊರಹೊಮ್ಮುತ್ತವೆ. ಮಹಾಭಾರತ ಹಾಗೂ ರಾಮಾಯಣದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನಮಾನವನ್ನು ನೀಡಲಾಗಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಹಲವಾರು ರೋಚಕ ಕಥೆಗಳು ಬರುತ್ತವೆ. ಆ ಕಥೆಗಳಲ್ಲಿ ಬರುವ ಪಾತ್ರಗಳು ನನ್ನನ್ನು ಪದೇಪದೇ ಕಾಡುತ್ತವೆ. ಅಂಥಹ ಕಾಡುವ ಪಾತ್ರಗಳಲ್ಲೇ ಪುರಾಣ ಕಾಲದ 9 ಸುರಸುಂದರಿಯರು ಸೇರಿಕೊಂಡಿದ್ದಾರೆ. ಅವರು ತಮ್ಮ ಸೌಂದರ್ಯ, ಸರಳತೆ, ಸುಗುಣ, ಸಂಸ್ಕಾರಗಳಿಂದ ಎಲ್ಲರ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಾರೆ. ರಾಮಾಯಣ ಮತ್ತು ಮಹಾಭಾರತ ಕಾಲದ 9 ಸುರಸುಂದರಿಯರು ಇಂತಿದ್ದಾರೆ…

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೧) ತೀಲೋತ್ತಮೆ :

ಮಹಾಭಾರತದ ಆದಿ ಪರ್ವದಲ್ಲಿ ಪಂಚ ಪಾಂಡವರು ದ್ರೌಪದಿ ಒಬ್ಬಳನ್ನೇ ಮದುವೆಯಾದರು. ಆವಾಗ ನಾರದ ಮಹರ್ಷಿಗಳು ಅವರಿಗೆ ಅವರ ನಡುವೆ ಕಲಹಗಳುಂಟಾಗಲು ಒಂದು ಹೆಣ್ಣು ಕಾರಣವಾಗಬಹುದು ಎಂದು ವಿವರಿಸುತ್ತಿದ್ದರು. ಆ ಸಮಯದಲ್ಲಿ ಪಾಂಡವರು ನಾರದರಿಗೆ ಹೇಗೆ ಹೆಣ್ಣು ನಮ್ಮ ನಡುವಿನ ಕಲಹಗಳಿಗೆ ಕಾರಣಳಾಗುತ್ತಾಳೆ ಎಂದು ಸವಾಲೆಸೆದಾಗ ಅವರು ಸುಂದ ಮತ್ತು ಉಪಸುಂದ ಎಂಬ ಅಸುರರ ಅವನತಿಯ ಕಥೆಯನ್ನು ವಿವರಿಸಿದರು. ಸುಂದ ಮತ್ತು ಅಸುಂದ ಎಂಬ ಸಹೋದರರು ವಿಂಧ್ಯ ಪರ್ವತದಲ್ಲಿ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮನನ್ನು ಒಲಿಸಿಕೊಂಡರು. ನಂತರ ತಮಗೆ ಅಮರತ್ವ ನೀಡಬೇಕೆಂದು ಬ್ರಹ್ಮನ ಬಳಿ ಬೇಡಿಕೆಯಿಟ್ಟರು. ಅವರ ಬೇಡಿಕೆಯನ್ನು ತಳ್ಳಿ ಹಾಕಿದ ಬ್ರಹ್ಮ ಅವರಿಗೆ ಅಮರತ್ವವನ್ನು ನೀಡಲು ನಿರಾಕರಿಸಿ ಬೇರೆ ವರವನ್ನು ನೀಡಿದನು. ಅಮರತ್ವದ ಬದಲಾಗಿ ನಿಮ್ಮ ಸಾವು ನಿಮ್ಮಿಬ್ಬರ ಕಲಹದಿಂದ ಮಾತ್ರ ಸಾಧ್ಯ, ಬೇರೆಯವರಿಂದ ಅಸಾಧ್ಯವೆಂಬ ವರವನ್ನು ನೀಡಿದನು. ಬ್ರಹ್ಮ ಕೊಟ್ಟ ವರದಿಂದ ಸುಂದ ಉಪಸುಂದರು ಬಹಳಷ್ಟು ಬೀಗಿದರು. ನಮ್ಮನ್ನು ಕೊಲ್ಲಲು ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಿಗೂ ಸಾಧ್ಯವಿಲ್ಲವೆಂದು ಕುಣಿದು ಕುಪ್ಪಳಿಸಿದರು. ಅದೇ ಅಹಂನಲ್ಲಿ ಅನೀತಿ ಅತ್ಯಾಚಾರಗಳನ್ನು ಪ್ರಾರಂಭಿಸಿದರು. ಸಾಧು ಸಜ್ಜನರ ಮೇಲೆ ದಾಳಿ ಮಾಡಿದರು. ದೇವಲೋಕದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ದೇವತೆಗಳ ಮೇಲೆ ಹಲ್ಲೆ ಮಾಡಿದರು. ಜೊತೆಗೆ ದೇವಲೋಕದಲ್ಲಿದ್ದ ಅಪ್ಸರೆಯರನ್ನು ತಮ್ಮಿಷ್ಟದಂತೆ ಬಳಸಿಕೊಂಡರು. ಅವರ ಕಿರುಕುಳವನ್ನು ತಾಳಲಾರದೆ ದೇವತೆಗಳೆಲ್ಲ ಬ್ರಹ್ಮನ ಮೋರೆ ಹೋದರು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ತಾನೇ ಕೊಟ್ಟ ವರ ತನಗೆ ಮುಳುವಾಯ್ತೆಂದು ಬ್ರಹ್ಮ ವ್ಯಥಿಸಿದನು. ದೇವಲೋಕದ ಮೇಲೆ ಅತ್ಯಾಚಾರ ಮಾಡಿದ ಅಸುರರಾದ ಸುಂದ ಉಪಸುಂದರನ್ನು ಉಪಾಯದಿಂದ ಸಂಹರಿಸುವುದಾಗಿ ಅಭಯಹಸ್ತ ನೀಡಿ ದೇವತೆಗಳನ್ನು ಸಂತೈಸಿದನು. ಬ್ರಹ್ಮ ದೇವಶಿಲ್ಪಿ ವಿಶ್ವಕರ್ಮನನ್ನು ಕರೆದು ಜಗತ್ತಿನಲ್ಲಿರುವ ಸುಂದರ ವಸ್ತುಗಳನ್ನೆಲ್ಲ ಸೇರಿಸಿಕೊಂಡು ಒಂದು ಸುಂದರವಾದ ಹೆಣ್ಣನ್ನು ಸೃಷ್ಟಿಸಲು ಆಜ್ಞಾಪಿಸಿದನು. ಅದೇ ರೀತಿ ದೇವಶಿಲ್ಪಿ ವಿಶ್ವಕರ್ಮ ಎಲ್ಲ ಸುಂದರ ವಸ್ತುಗಳ ಕಣಕಣದಿಂದ ಸೌಂದರ್ಯವನ್ನು ಸಾಣೆ ಹಿಡಿದು ಒಂದೆಡೆಗೆ ಸೇರಿಸಿ ಸುಂದರವಾದ ಸ್ತ್ರೀಯನ್ನು ಸೃಷ್ಟಿಸಿದನು. ಅವಳು ತನ್ನ ದೇಹದ ಕಣಕಣದಿಂದಲೂ ಉತ್ತಮವಾಗಿರುವುದರಿಂದ ಅವಳಿಗೆ ತಿಲೋತ್ತಮೆ ಎಂದು ಹೆಸರಿಟ್ಟರು. ಅವಳ ದೇಹದ ಪ್ರತಿ ಕಣಕಣದಿಂದಲೂ ಸೌಂದರ್ಯ ಪ್ರಖರಿಸುತ್ತಿತ್ತು. ಅವಳ ಸೌಂದರ್ಯದ ಸೆಳೆತದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಯಾರಿಗೂ ಅವಳನ್ನು ಬಹಳ ಕ್ಷಣಗಳ ಕಾಲ ನೋಡಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವಳ ಅಂಗಾಂಗಗಳಿಂದ ಹೊರಹೊಮ್ಮುತ್ತಿದ್ದ ಸೌಂದರ್ಯದ ತೇಜಸ್ಸು ಅಷ್ಟೊಂದು ಪ್ರಕಾಶಮಾನವಾಗಿತ್ತು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ತಿಲೋತ್ತಮೆಗೆ ಮಹಾ ಶಿವನನ್ನು ಸೆಳೆಯುವ ಆಸೆಯಾಯಿತು. ಅದಕ್ಕಾಗಿ ಅವಳು ಕೈಲಾಸ ಪರ್ವತದ ಸುತ್ತಮುತ್ತ ಸುಳಿದಾಡಲು ಶುರು ಮಾಡಿದಳು. ಶಿವ ಅವಳನ್ನು ನೋಡುವುದಕ್ಕಾಗಿ ಹರಸಾಹಸಪಟ್ಟನು. ಅವನ ಹರಸಾಹಸದ ಪ್ರಯತ್ನ ಪಕ್ಕದಲ್ಲಿದ್ದ ಪಾರ್ವತಿಗೆ ಗೊತ್ತಾದಾಗ ಅವಳು ಕೋಪದಲ್ಲಿ ತನ್ನ ಕೈಗಳಿಂದ ಶಿವನ ಎರಡು ಕಣ್ಣುಗಳನ್ನು ಮುಚ್ಚಿದಳು. ಶಿವನ ಕಣ್ಣುಗಳನ್ನು ಪಾರ್ವತಿ ಮುಚ್ಚಿರುವುದರಿಂದ ಜಗತ್ತಿನಲ್ಲಿ ಘಾಡವಾದ ಅಂಧಕಾರ ಆವರಿಸಿ ಆಹಾಕಾರ ಶುರುವಾಯಿತು. ಆಗ ಬೇರೆ ವಿಧಿಯಿಲ್ಲದೆ ಶಿವ ಮೂರನೇ ಕಣ್ಣನ್ನು ಸೃಷ್ಟಿಸಿಕೊಂಡು ಜಗತ್ತನ್ನು ಮತ್ತೆ ಮೊದಲಿನಂತೆ ಬೆಳಗಿದನು. ಹೀಗಾಗಿ ತಿಲೋತ್ತಮೆ ಶಿವನನ್ನು ಸೆಳೆಯುವ ಪ್ರಯತ್ನವನ್ನು ತ್ಯಜಿಸಿ ಬ್ರಹ್ಮನ ಬಳಿ ಹೋದಳು. ದೇವಲೋಕಕ್ಕೆ ಕಂಟಕವಾಗಿರುವ ಸುಂದ ಮತ್ತು ಉಪಸುಂದ ಎಂಬ ಅಸುರರನ್ನು ಕುಟಿಲತೆಯಿಂದ ಕೊಲ್ಲುವ ಜವಾಬ್ದಾರಿಯನ್ನು ಬ್ರಹ್ಮ ತಿಲೋತ್ತಮೆಯ ಹೇಗಲೇರಿಸಿದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಬ್ರಹ್ಮ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವುದಕ್ಕಾಗಿ ತಿಲೋತ್ತಮೆ ವಿಂದ್ಯಾ ಪರ್ವತದ ಮೇಲೆ ಆಕಾಶದಿಂದಿದಳು. ವಿಂಧ್ಯ ಪರ್ವತದಲ್ಲಿ ಸುಂದ ಮತ್ತು ಉಪಸುಂದರಿಬ್ಬರು ಸುರಪಾನ ಮಾಡಿ ಅಪ್ಸರೆಯರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಳಿದ ತಿಲೋತ್ತಮೆ ಮನಮೋಹಕ ನಗೆಯನ್ನು ಬೀರುತ್ತಾ ಅಲ್ಲಿದ್ದ ಹೂಗಳನ್ನು ಮೆಲ್ಲನೆ ಕೀಳುತ್ತಾ ಸಮಯ ಕಳೆಯುತ್ತಾ ನಿಂತಳು. ಅವಳ ಸೌಂದರ್ಯದ ಸೆಳೆತಕ್ಕೆ ಆ ಅಸುರ ಸಹೋದರರ ಗಮನ ಅವಳೆಡೆಗೆ ವಾಲಿತು. ಅವಳ ಹಾರಾಡುವ ಕೂದಲು, ಕೊಲ್ಲುವ ಕಣ್ಣೋಟ, ಕೈಬೀಸಿ ಕರೆಯುವ ಕಿವಿಯೋಲೆ, ಅರೆಬರೆ ಮುಚ್ಚಿದ ಎದೆ, ಬಳ್ಳಿಯಂತೆ ಬಳಕುವ ನಡು ಅವರಿಬ್ಬರನ್ನು ಆಕರ್ಷಿಸಿತು. ತಕ್ಷಣವೇ ಸುಂದ ಉಪಸುಂದರಿಬ್ಬರು ಅವಳ ಎಡಬಲ ಭುಜಗಳನ್ನು ಬಳಸಿ ಅಪ್ಪಿಕೊಂಡು ಅವಳ ಕೈಹಿಡಿದು ಅವಳನ್ನು ತಮ್ಮ ಸ್ವತ್ತಾಗಿಸಿಕೊಳ್ಳಲು ಮುಂದಾದರು. ಇಬ್ಬರು ಅವಳ ಕೈಹಿಡಿದು “ನನ್ನನ್ನು ಮದುವೆಯಾಗು…” ಎಂದು ಒತ್ತಾಯಿಸಿದರು. ಅದಕ್ಕವಳು “ನಿಮ್ಮಿಬ್ಬರಲ್ಲಿ ಯಾರು ಬಲಿಷ್ಟರೋ ಅವರನ್ನು ನಾನು ಮದುವೆಯಾಗುತ್ತೇನೆ…” ಎಂದು ಹೇಳಿದಳು. ಅವಳನ್ನು ಮದುವೆಯಾಗುವುದಕ್ಕಾಗಿ ಸಹೋದರರಿಬ್ಬರು ಶತ್ರುಗಳಂತೆ ಕಿತ್ತಾಡಲು ಪ್ರಾರಂಭಿಸಿದರು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಈ ಮೊದಲು ಸಂಪತ್ತು, ಸಾಮ್ರಾಜ್ಯಗಳೆಲ್ಲವನ್ನು ಸಮನಾಗಿ ಅನುಭವಿಸಿದ ಸಹೋದರರು ಈಗ ಒಂದು ಹೆಣ್ಣಿಗಾಗಿ ಪರಸ್ಪರ ಹೊಡೆದಾಡಿಕೊಂಡು ಸತ್ತು ಶವವಾಗಿ ಅವಳ ಕಾಲಡಿಗೆ ಉರುಳಿದರು. ತನ್ನ ಕುಟಿಲತೆ ಕೈಗೂಡಿದ್ದರಿಂದ ತಿಲೋತ್ತಮೆ ನಸುನಗುತ್ತಾ ಬ್ರಹ್ಮನ ಬಳಿಗೆ ಹೋಗಿ ನಡೆದ ಸಂಗತಿಯನ್ನು ವಿವರಿಸಿದಳು. ಅವಳ ಕಾರ್ಯಸಾಧನೆಯನ್ನು ಮೆಚ್ಚಿ ಬ್ರಹ್ಮ ಅವಳಿಗೆ ಮನ ಬಯಸಿದ ಕಡೆಗೆ ಸ್ವತಂತ್ರವಾಗಿ ಇರುವ, ತಿರುಗಾಡುವ ವರವನ್ನು ನೀಡಿ ಅವಳ ಮನತಣಿಸಿದನು. ಉಳಿದೆಲ್ಲ ಅಪ್ಸರೆಯರು ದೇವತೆಗಳ ಕಾಮದ ಕೈಗೊಂಬೆಯಾಗಿ ನರಳುತ್ತಿದ್ದರೆ ತಿಲೋತ್ತಮೆ ತಾನು ಸಾಧಿಸಿದ ಒಂದೇ ಒಂದು ಕುಟಿಲತೆಯ ಫಲವಾಗಿ ಮನಬಂದ ಕಡೆಗೆ ಸ್ವಚ್ಛಂದವಾಗಿ ಸಂಚರಿಸುತ್ತಿದ್ದಾಳೆ….

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೨) ಊರ್ವಶಿ :

ನರ ಮತ್ತು ನಾರಾಯಣರಿಬ್ಬರು ಸಾವಿರಾರು ವರ್ಷಗಳಿಂದ ಹಿಮಾಲಯದ ಬದ್ರಿನಾಥ ದೇವಸ್ಥಾನದಲ್ಲಿ ಧ್ಯಾನ ಮಗ್ನನಾಗಿ ಕುಳಿತಿದ್ದರು. ನರ ಎಂದರೆ ಅರ್ಜುನ ಮತ್ತು ನಾರಾಯಣನೆಂದರೆ ಶ್ರೀಕೃಷ್ಣ. ನರ ಮತ್ತು ನಾರಾಯಣರ ಕಠಿಣ ತಪಸ್ಸು ದೇವತೆಗಳ ರಾಜ ದೇವೆಂದ್ರನ ಅಸಮಾಧಾನಕ್ಕೆ ಕಾರಣವಾಯಿತು. ಏಕೆಂದರೆ ನರ ಮತ್ತು ನಾರಾಯಣರು ತಪಸ್ಸು ಮಾಡಿ ಇನ್ನು ಹೆಚ್ಚಿನ ದೈವಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದುವುದು ದೇವೆಂದ್ರನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿ ಆತ ಅವರ ತಪಸ್ಸನ್ನು ಭಂಗಗೊಳಿಸುವುದಕ್ಕಾಗಿ ತನ್ನ ಆಸ್ಥಾನದ ಸುಂದರ ಅಪ್ಸರೆಯರಾದ ರಂಭೆ ಮತ್ತು ಮೇನಕೆಯರನ್ನು ಕಳುಹಿಸಿದನು. ಅವರ ಜೊತೆಗೆ ಇನ್ನು ಅನೇಕ ಅಪ್ಸರೆಯರನ್ನು ಕಳುಹಿಸಿದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ನರ ಮತ್ತು ನಾರಾಯಣರು ಅಪ್ಸರೆಯರ ಅಂದಕ್ಕೆ ಮನಸೋತು ತಮ್ಮ ತಪಸ್ಸನ್ನು ನಿಲ್ಲಿಸುತ್ತಾರೆ ಎಂಬ ನಂಬಿಕೆಯಲ್ಲಿ ದೇವೇಂದ್ರ ನಿಶ್ಚಿಂತೆಯಿಂದ ಇದ್ದನು. ಏಕೆಂದರೆ ಅವನಿಗೆ ರಂಭೆ ಮತ್ತು ಮೇನಕೆಯರ ಸೌಂದರ್ಯದ ಮೇಲೆ ಗರ್ವವಿತ್ತು. ರಂಭೆ ಮೇನಕೆಯರನ್ನು ಸೇರಿ ಹಲವಾರು ಸುಂದರ ಅಪ್ಸರೆಯರು ಕಣ್ಮುಂದೆ ಸುಳಿದಾಡಿದರೂ ನರ ನಾರಾಯಣರು ಕಿಂಚಿತ್ತೂ ವಿಚಲಿತರಾಗಲಿಲ್ಲ. ಆಗ ಅಪ್ಸರೆಯರಾದ ರಂಭೆ ಮತ್ತು ಮೇನಕೆಯರು ಅಹಂಕಾರದಿಂದ ನರ ನಾರಾಯಣರಿಗೆ “ದೇವೇಂದ್ರ ನಮ್ಮನ್ನು ನಿಮಗೆ ಕಾಣಿಕೆಯಾಗಿ ನೀಡಿದ್ದಾನೆ. ನಮ್ಮನ್ನು ಸ್ವೀಕರಿಸಬೇಕೆಂದು ಕೇಳಿಕೊಂಡರು. ಅವರಿಗೆ ನಾವೇ ವಿಶ್ವ ಸುಂದರಿಯರು ಎಂಬ ಅಹಂ ಅಹಂಕಾರದಿಂದ ಮಾತಾಡುವಂತೆ ಮಾಡಿತ್ತು. ಅದಕ್ಕಾಗಿ ಅವರು ಜಂಭದಿಂದ ಮಾತಾಡಿದರು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಅಪ್ಸರೆಯರ ಸೊಕ್ಕನ್ನು ಮುರಿಯಲು ನಾರಾಯಣನು ಒಂದು ಹೂವನ್ನು ತೆಗೆದುಕೊಂಡು ತನ್ನ ತೊಡೆಗೆ ಅಪ್ಪಳಿಸಿದನು. ಆಗ ಅವನ ತೊಡೆಯಿಂದ ಓರ್ವ ಸುಂದರವಾದ ಕನ್ಯೆ ಜನ್ಮ ತಾಳಿದಳು. ಅವಳು ರಂಭೆ, ಮೇನಕೆಯರಿಗಿಂತ ಎಷ್ಟೋ ಪಟ್ಟು ಸುಂದರವಾಗಿದ್ದಳು. ದೇವಲೋಕದಿಂದ ಬಂದ ಅಪ್ಸರೆಯರು ಅವಳ ಸೌಂದರ್ಯದ ಮುಂದೆ ಸಣ್ಣವರಾಗಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತರು. ಆಗ ನಾರಾಯಣನು ಅಪ್ಸರೆಯರಾದ ರಂಭೆ ಮೇನಕೆಯರಿಗೆ “ದೈಹಿಕ ಸೌಂದರ್ಯ ಶಾಶ್ವತವಾದುದಲ್ಲ…” ಎಂಬುದನ್ನು ತಿಳಿ ಹೇಳಿದನು. ಅಪ್ಸರೆಯರ ಗರ್ವಭಂಗ ಮಾಡಿದ ಸುಂದರಿ ತನ್ನ ಉರ ಭಾಗದಿಂದ ಅಂದರೆ ತೊಡೆಯಿಂದ ಜನ್ಮತಾಳಿದ್ದರಿಂದ ನಾರಾಯಣ ಅವಳಿಗೆ ಊರ್ವಶಿ ಎಂದು ಹೆಸರಿಟ್ಟನು. ನಂತರ ಆತ ಅಪ್ಸರೆಯರಿಗೆ “ಊರ್ವಶಿಯನ್ನು ದೇವೇಂದ್ರನಿಗೆ ನಮ್ಮ ಕಡೆಯಿಂದ ಕಾಣಿಕೆಯಾಗಿ ಕೊಡುವಂತೆ” ಹೇಳಿ ಅವಳನ್ನು ಅವರೊಂದಿಗೆ ದೇವಲೋಕಕ್ಕೆ ಕಳುಹಿಸಿದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಅಪ್ಸರೆಯರ ಅಂದಕ್ಕೆ ಅಂಧರಾಗದೆ ನರ ನಾರಾಯಣರಿಬ್ಬರು ತಮ್ಮ ತಪಸ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇನ್ನು ಹೆಚ್ಚಿನ ದೈವಿಕ ಶಕ್ತಿಗಳನ್ನು ಪಡೆದುಕೊಂಡು ಮತ್ತಷ್ಟು ಬಲಿಷ್ಟವಾದರು. ತನ್ನ ಕುಟಿಲ ಉಪಾಯ ಕೈಗೂಡದಿದ್ದರಿಂದ ದೇವೇಂದ್ರ ಹತಾಶಭಾವದಲ್ಲಿದ್ದನು. ಅಪ್ಸರೆಯರೊಂದಿಗೆ ಬಂದ ಅಪರೂಪದ ಸುಂದರಿ ಊರ್ವಶಿಯನ್ನು ನೋಡಿ ಅವನ ಹತಾಶೆ ಹಠಾತ್ತನೆ ಮಾಯವಾಯಿತು. ದೇವೇಂದ್ರನ ಆಜ್ಞೆಯ ಮೇರೆಗೆ ಊರ್ವಶಿ ಅವನ ಆಸ್ಥಾನದ ಮುಖ್ಯ ನರ್ತಕಿಯಾಗಿ ಎಲ್ಲರನ್ನು ರಂಜಿಸಲು ಒಪ್ಪಿಕೊಂಡು ದೇವಲೋಕದ ಪ್ರಖ್ಯಾತ ಅಪ್ಸರೆಯಾದಳು…

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೩) ಮಂಡೋದರಿ :

ಮಂಡೋದರಿ ರಾಮಾಯಣದ ಖಳನಾಯಕ ರಾವಣನ ಧರ್ಮಪತ್ನಿಯಾಗಿದ್ದಾಳೆ. ಇವಳು ಸೀತೆಗಿಂತಲೂ ಸುಂದರವಾಗಿದ್ದಳು ಎಂಬ ಕಲ್ಪನೆಯಿದೆ. ಆದರೆ ರಾಮಾಯಣದಲ್ಲಿ ಎಲ್ಲಿಯೂ ನೇರವಾಗಿ ಮಂಡೋದರಿಯ ಸೌಂದರ್ಯವನ್ನು ಹಾಡಿ ಹೊಗಳಿಲ್ಲ ಮತ್ತು ಹೆಚ್ಚಿಗೆ ವರ್ಣಿಸುವ ಸಾಹಸವನ್ನು ಮಾಡಿಲ್ಲ. ಆದರೂ ಕೆಲವು ಸಂಗತಿಗಳಿಂದ ನಾವು ಮಂಡೋದರಿ ಸೀತೆಗಿಂತಲೂ ಸುಂದರವಾಗಿದ್ದಳು ಎಂಬುದನ್ನು ತಿಳಿದುಕೊಳ್ಳಬಹುದು. ಹನುಮಂತ ಸೀತೆಯನ್ನು ಹುಡುಕುತ್ತಾ ಮೊದಲ ಸಲ ಲಂಕೆಗೆ ಬಂದಾಗ ಮಂಡೋದರಿಯನ್ನೇ ಸೀತೆಯೆಂದುಕೊಂಡಿದ್ದನು. ಏಕೆಂದರೆ ಶ್ರೀರಾಮ ವರ್ಣಿಸಿದ ಸೀತೆಯ ಎಲ್ಲ ಗುಣಲಕ್ಷಣಗಳು ಮಂಡೋದರಿಯಲ್ಲಿದ್ದವು. ಹನುಮಂತ ಮಂಡೋದರಿಯನ್ನು ಸೀತೆಯೆಂದುಕೊಂಡ ಒಂದು ಸಂಗತಿ ಸಾಕು ಮಂಡೋದರಿ ಸುರ ಸುಂದರಿಯಾಗಿದ್ದಳು ಎಂಬುದನ್ನು ಸಾಬೀತುಪಡಿಸೋಕೆ…

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೪) ಅಹಲ್ಯ :

ದೇವಲೋಕದಲ್ಲಿ ತಾನೇ ಬಹು ಸುಂದರಿ ಎಂಬ ಅಹಂ ಊರ್ವಶಿಯ ತಲೆ ಸೇರಿತ್ತು. ಅವಳ ಸೊಕ್ಕನ್ನು ಅಡಗಿಸುವುದಕ್ಕಾಗಿ ಬ್ರಹ್ಮ ಓರ್ವ ಅಪರೂಪದ ಸುಂದರಿಯನ್ನು ಸೃಷ್ಟಿಸಲು ಮುಂದಾದನು. ಬ್ರಹ್ಮ ಬಹಳಷ್ಟು ತಲೆ ಉಪಯೋಗಿಸಿ ನೀರಿನಿಂದ ಓರ್ವ ಸುಂದರಿಯನ್ನು ಸೃಷ್ಟಿಸಿದನು. ಜಗತ್ತಿನಲ್ಲಿರುವ ಎಲ್ಲ ಸುಂದರ ವಸ್ತುಗಳ ಸೌಂದರ್ಯವನ್ನು ಹೊಸೆದು ಆ ಸುಂದರಿಯ ದೇಹದ ಪ್ರತಿಯೊಂದು ಅಂಗ ಅಂಗಗಳಲ್ಲಿ ಸೇರಿಸಿದನು. ಅವಳಲ್ಲಿ ಕುರೂಪತನದ ಒಂದು ಕಳೆಯೂ ಇರಲಿಲ್ಲ. ಅದಕ್ಕಾಗಿ ಅವಳಿಗೆ ಅಹಲ್ಯ ಎಂದು ಹೆಸರಿಟ್ಟನು. ಅಹಲ್ಯ ನಿಜಕ್ಕೂ ಮನಮೋಹಕ ಸುಂದರಿಯಾಗಿದ್ದಳು. ಅದಕ್ಕಾಗಿ ಬ್ರಹ್ಮ ಅವಳು ತಾರುಣ್ಯ ತಲುಪುವವರೆಗೆ ಅವಳನ್ನು ಗೌತಮ ಮಹರ್ಷಿಯ ಆಶ್ರಮಲ್ಲಿರಿಸಿದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಅಹಲ್ಯ ಗೌತಮ ಮಹರ್ಷಿಯ ಸುಂದರವಾದ ಆಶ್ರಮದಲ್ಲಿ ಹಾಡಿ ನಲಿಯುತ್ತಾ ತಾರುಣ್ಯ ತಲುಪಿದಳು. ಅವಳು ಋತುಮತಿಯಾದಾಗ ಗೌತಮ ಮಹರ್ಷಿ ಅವಳನ್ನು ಬ್ರಹ್ಮನ ವಶಕ್ಕೊಪ್ಪಿಸಿ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದನು. ಗೌತಮನ ನಿಯತ್ತಿಗೆ ಬ್ರಹ್ಮ ಮನಸೋತನು. ಅಹಲ್ಯಳಂಥ ಸುಂದರಿಯನ್ನು ಸಂರಕ್ಷಿಸಿ ಸುರಕ್ಷಿತವಾಗಿ ತನ್ನ ಬಳಿ ಮರಳಿ ಕರತಂದಿದ್ದಕ್ಕೆ ಬ್ರಹ್ಮ ಗೌತಮ ಮಹರ್ಷಿಯನ್ನು ಹಾಡಿ ಹೊಗಳಿದನು. ಅವನ ಪ್ರಾಮಾಣಿಕತೆಯನ್ನು ಮೆಚ್ಚಿ ಅಹಲ್ಯಳನ್ನು ಅವನಿಗೆ ಕಾಣಿಕೆಯಾಗಿ ನೀಡಿದನು. ಆದರೆ ಬ್ರಹ್ಮನ ಈ ನಿರ್ಧಾರಕ್ಕೆ ದೇವತೆಗಳ ರಾಜ ದೇವೇಂದ್ರ ಸಮ್ಮತಿಸಲಿಲ್ಲ. ಜಗತ್ತಿನಲ್ಲಿರುವ ಪ್ರತಿಯೊರ್ವ ಸುಂದರ ಹೆಣ್ಣು ಬರೀ ನನ್ನ ಸೊತ್ತು ಎಂಬುದು ದೇವೇಂದ್ರನ ವಾದವಾಗಿತ್ತು. ಅವನ ಮೊಂಡುವಾದದಿಂದಾಗಿ ಬ್ರಹ್ಮ ಅಹಲ್ಯಳ ಸ್ವಯಂವರವನ್ನು ಏರ್ಪಡಿಸಿದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ದೇವಲೋಕದ ಸುರ ಅಸುರರು ಅಹಲ್ಯಳಿಗಾಗಿ ಪರಿತಪಿಸುತ್ತಿದ್ದರು. ಏಕೆಂದರೆ ಅವಳು ಸುರಸುಂದರಿಯರಿಗಿಂತಲೂ ಸುಂದರವಾಗಿದ್ದಳು. ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಹಗಲು ರಾತ್ರಿ ಹಂಬಲಿಸುತ್ತಿದ್ದನು. ಅವಳನ್ನು ಮನಸೋಯಿಚ್ಛೆ ಅನುಭವಿಸಲು ಪ್ರತಿಕ್ಷಣ ಚಟಪಡಿಸುತ್ತಿದ್ದನು. ದೇವೇಂದ್ರನ ಸಮೇತ ಎಲ್ಲರ ಕಣ್ಣುಗಳು ಅಹಲ್ಯಳ ಮೇಲಿದ್ದವು. ಒಂದಿನ ಬ್ರಹ್ಮ ಅವಳ ಸ್ವಯಂವರವನ್ನು ಏರ್ಪಡಿಸಿದನು. ಯಾರು ಮೊದಲು ಮೂರು ಲೋಕಗಳನ್ನು ಪ್ರದಕ್ಷಿಣೆ ಹಾಕಿ ಮರಳಿ ಬರುವರೋ ಅಹಲ್ಯ ಅವರ ಸ್ವತ್ತಾಗುತ್ತಾಳೆಂದು ಘೋಷಿಸಿದನು. ಇಂದ್ರ ತ್ರಿಲೋಕ ಪ್ರದಕ್ಷಿಣೆಗೆ ಹೊರಟು ಹೋದ ನಂತರ ಗೌತಮ ಮಹರ್ಷಿಯು ಕರುವಿಗೆ ಜನ್ಮ ನೀಡುತ್ತಿದ್ದ ಕಾಮಧೇನುವಿಗೆ ಪ್ರದಕ್ಷಿಣೆ ಹಾಕಿ ಸ್ವಯಂವರದಲ್ಲಿ ಗೆದ್ದು ಅಹಲ್ಯಯನ್ನು ವರಿಸಿದನು. ಏಕೆಂದರೆ ವೇದಗಳ ಪ್ರಕಾರ ಕಾಮಧೇನು ಮೂರು ಲೋಕಗಳಿಗೆ ಸಮವಾಗಿತ್ತು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಅಹಲ್ಯ ಗೌತಮನ ಕೈಹಿಡಿದು ಮಿಥಿಲೆಯಲ್ಲಿರುವ ಅವನಾಶ್ರಮಕ್ಕೆ ಬಂದಳು. ಗೋದಾವರಿ ನದಿ ತಟದಲ್ಲಿದ್ದ ಆ ಆಶ್ರಮ ಅಹಲ್ಯಳ ಪಾದಸ್ಪರ್ಶದಿಂದ ಪಾವನವಾಯಿತು. ಅಹಲ್ಯಳಂಥ ಸುಂದರಿ ಗೌತಮನ ಸತಿಯಾಗಿ ಬಂದಿದ್ದರಿಂದ ಆಶ್ರಮದ ಸೌಂದರ್ಯ ಮತ್ತಷ್ಟು ಹೆಚ್ಚಾಯಿತು. ತನಗಿಂತಲೂ ವಯಸ್ಸಿನಲ್ಲಿ ಎಷ್ಟೋ ವರ್ಷ ಹಿರಿಯನಾಗಿರುವ ಗೌತಮನನ್ನು ಅಹಲ್ಯ ಮನಸ್ಸಪೂರ್ವಕವಾಗಿ ಒಪ್ಪಿಕೊಂಡು ತನ್ನನ್ನು ಸಂಪೂರ್ಣವಾಗಿ ಅವನಿಗೆ ಸಮರ್ಪಿಸಿಕೊಂಡಳು. ಸ್ವಚ್ಛ ಮನಸ್ಸಿನಿಂದ ತನ್ನ ಸತಿಧರ್ಮವನ್ನು ನಿಭಾಯಿಸಿ ಪಂಚ ಪತಿವ್ರತೆಯರಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದಳು. ಆಕೆ ಕಾಯಾ ವಾಚಾ ಮನಸಾ ತನ್ನ ಪತಿಯನ್ನು ಆದರಿಸುತ್ತಿದ್ದಳು. ಆದರೆ ದೇವೇಂದ್ರನ ವಕ್ರದೃಷ್ಟಿ ಇನ್ನು ಅವಳ ಮೇಲೆಯೇ ನೆಟ್ಟಿತ್ತು. ಏನಾದರೂ ಅಹಲ್ಯಳನ್ನು ಒಂದು ಸಲ ಅನುಭವಿಸಲೇಬೇಕು ಎಂಬ ಹಠದಲ್ಲಿ ಅವನಿದ್ದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ದೇವೇಂದ್ರನಲ್ಲಿ ಕಪಟತನಕ್ಕೇನು ಕೊರತೆಯಿರಲಿಲ್ಲ. ಆತ ಗೌತಮನ ದಿನಚರಿಯನ್ನು ಅಧ್ಯಯನ ಮಾಡಿ ಗೌತಮ ದಿನನಿತ್ಯ ಮುಂಜಾನೆ ಸುರ್ಯೋದಯಕ್ಕಿಂತ ಮುಂಚೆ ಸಂಧ್ಯಾವಂದನೆಗಾಗಿ ನದಿಗೆ ತೆರಳುತ್ತಾನೆ, ಆ ಸಮಯದಲ್ಲಿ ಆಶ್ರಮದಲ್ಲಿ ಅಹಲ್ಯ ಒಬ್ಬಳೇ ಇರುತ್ತಾಳೆ ಎಂಬುದನ್ನು ಕಂಡುಕೊಂಡನು. ತನ್ನ ಕಪಟ ಯೋಜನೆಯಂತೆ ದೇವೇಂದ್ರ ಮಧ್ಯರಾತ್ರಿ ಕೋಳಿಯನ್ನು ಕೂಗಿಸಿ ಗೌತಮನನ್ನು ನದಿಯೆಡೆಗೆ ಹೋಗುವಂತೆ ಮಾಡಿದನು. ನಂತರ ಚಂದ್ರನಿಗೆ ಮುಂಜಾನೆಯ ತನಕ ಮರೆಯಲ್ಲಿರಲು ಕೇಳಿಕೊಂಡು ಆಶ್ರಮಕ್ಕೆ ಕಾಲಿಟ್ಟನು. ಆಶ್ರಮದಲ್ಲಿ ಗೌತಮನಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ತನ್ನ ಮಾಯಾಶಕ್ತಿಯನ್ನು ಬಳಸಿಕೊಂಡು ಗೌತಮನ ಮಾರುವೇಷ ಧರಿಸಿ ಅಹಲ್ಯಳ ಕೋಣೆ ಸೇರಿದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಮಂದಸ್ಮಿತಳಾಗಿ ಮಲಗಿದ್ದ ಅಹಲ್ಯಳ ನಿದ್ರಾಭಂಗ ಮಾಡಿದ ದೇವೇಂದ್ರ ಅವಳಂದವನ್ನು ವರ್ಣಿಸಲು ಪ್ರಾರಂಭಿಸಿದನು. ಮೊದಮೊದಲು ಅವಳಿಗೆ ದೇವೇಂದ್ರನ ಕಪಟತನ ತಿಳಿಯಲಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಅವಳಿಗೆ ದೇವೇಂದ್ರನ ಸಂಚು ಅರ್ಥವಾಯಿತು. ಆದರೆ ದೇವೇಂದ್ರ ಅವಳನ್ನು ಹಾಗೆಯೇ ವರ್ಣಿಸುತ್ತಾ ಅವಳನ್ನು ಮರಳು ಮಾಡಿದನು. ಅಳತೆಕಟ್ಟಿನ ಶರೀರದ, ಸಪೂರ ಸೊಂಟದ ಸುಂದರಿ ನೀನೊಬ್ಬಳೇ ಎಂದು ವರ್ಣಿಸಿ ಅವಳನ್ನು ಸಂಪೂರ್ಣವಾಗಿ ತನ್ನ ಕೈವಶಮಾಡಿಕೊಂಡನು. ದೇವೇಂದ್ರ ಇಷ್ಟೆಲ್ಲ ಹರಸಾಹಸ ಮಾಡಿ ಅವಳನ್ನು ಹುಡುಕಿಕೊಂಡು ಬಂದಿದ್ದರಿಂದ ಅವಳಿಗೆ ತಾನೇ ವಿಶ್ವಸುಂದರಿಯೆಂಬ ಅಹಂ ತಲೆಸೇರಿತು. ಅವಳು ತನ್ನ ಸೌಂದರ್ಯದ ಮೇಲೆ ಒಣಜಂಭಪಟ್ಟುಕೊಂಡು ಗೌತಮನ ಮಾರುವೇಷದಲ್ಲಿದ್ದ ದೇವೇಂದ್ರನಿಗೆ ಶರಣಾದಳು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಸ್ವತಃ ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಸ್ವರ್ಗದಿಂದ ಧರೆಗಿಳಿದು ಬಂದಿದ್ದಕ್ಕೆ ಅವಳು ತನ್ನ ಮೇಲೆ ಅಭಿಮಾನಪಟ್ಟಳು. ದೇವೇಂದ್ರನ ಕಾಮದ ಕಳ್ಳ ಕೋರಿಕೆಯನ್ನು ಧಿಕ್ಕರಿಸುವ ಧೈರ್ಯ ಅಹಲ್ಯಳಲ್ಲಿರಲಿಲ್ಲ. ಅಲ್ಲದೆ ದೇವೇಂದ್ರ ದೇವತೆಗಳ ರಾಜನಾಗಿರುವುದರಿಂದ ಆತ ಗೌತಮನ ಕೋಪದಿಂದ ತನ್ನನ್ನು ಕಾಪಾಡಬಲ್ಲನು ಎಂಬ ಮೊಂಡು ಧೈರ್ಯದ ಮೇಲೆ ಅಹಲ್ಯ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. ಆತ ಮಧ್ಯರಾತ್ರಿಯಿಂದ ಮುಂಜಾನೆ ತನಕ ಅವಳನ್ನು ಮನಬಂದಂತೆ ಅನುಭವಿಸಿ ತನ್ನಾಸೆಯನ್ನು ತೀರಿಸಿಕೊಂಡನು. ಅವಳ ಪ್ರತಿ ಅಂಗಾಂಗಗಳಲ್ಲಿ ಸೌಂದರ್ಯ ಅಡಗಿತ್ತು. ಅವಳು ಪ್ರತಿ ಅಂಗದಿಂದಲೂ ಪರಮ ಸುಂದರಿಯಾಗಿದ್ದಳು. ಅವಳನ್ನು ಸಂತೃಪ್ತನಾಗುವ ತನಕ ಅನುಭವಿಸಿದ ದೇವೇಂದ್ರ ಮುಂಜಾನೆ ಅವಳನ್ನು ಹಾಗೆಯೇ ಬಿಟ್ಟು ಹೊರಡಲು ಸಿದ್ಧನಾದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಅಹಲ್ಯಳ ಸನ್ನೆಯ ಮೇರೆಗೆ ದೇವೇಂದ್ರ ಅವಸರದಿಂದ ಆಶ್ರಮದಿಂದ ಫರಾರಿಯಾಗುವಾಗ ಗೌತಮ ಮಹರ್ಷಿಯ ಕಣ್ಣಿಗೆ ಬಿದ್ದನು. ತನ್ನ ತಪಸ್ಸಶಕ್ತಿಯಿಂದ ಗೌತಮನಿಗೆ ಎಲ್ಲವೂ ಅರ್ಥವಾಯಿತು. ಆತ ಕೆರಳಿ ಕೆಂಡಾಮಂಡಲವಾದನು. ಅವನ ಕೂಗಾಟವನ್ನು ಕೇಳಿ ಅಹಲ್ಯ ಹೆದರುತ್ತಾ ಓಡೋಡಿ ಬಂದು ಅವನ ಕಾಲಿಗೆ ಬಿದ್ದು ಗೋಳಾಡಿ ಕ್ಷಮೆ ಕೇಳಿದಳು. ಆದರೆ ಗೌತಮನ ಕೋಪ ಅವಳ ಮೊಸಳೆ ಕಣ್ಣೀರಿಗೆ ಕರಗಲಿಲ್ಲ. ಅವನು ಅವಳಿಗೆ ಕಲ್ಲಾಗಿರುವಂತೆ ಶಾಪವಿಟ್ಟನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಗೌತಮನ ಕೋಪಕ್ಕೆ ಹೆದರಿ ದೇವೇಂದ್ರ ಮರದ ಹಿಂದೆ ಅಡಗಿ ನಿಂತಿದ್ದನು. ಅವನಿಗೂ ಸಹ ಗೌತಮ ಮಹರ್ಷಿ ಶಾಪವಿಟ್ಟು ಹಿಮಾಲಯಕ್ಕೆ ತೆರಳಿದನು. ಗೌತಮನ ಶಾಪದಿಂದ ದೇವೇಂದ್ರನ ಜನನಾಂಗಗಳು ಒಡೆದು ಸಾವಿರ ತುಂಡುಗಳಾದವು. ಅವನ ಮೈಮೇಲೆ ಸಾವಿರ ಜನನಾಂಗಗಳಾದವು. ನಂತರ ಆತ ಶಿವನ ಅನುಗ್ರಹದಿಂದ ಮೈಮೇಲಿದ್ದ ಸಾವಿರ ಜನನಾಂಗಗಳನ್ನು ಸಾವಿರ ಕಣ್ಣುಗಳಾಗಿ ಪರಿವರ್ತಿಸಿಕೊಂಡು ಶಾಪಮುಕ್ತನಾದನು. ಆದರೆ ಅಹಲ್ಯ ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮೋಡದ ಮರೆಯಲ್ಲಿರುವ ಸೂರ್ಯನಂತೆ, ಕಲೆಗಳಲ್ಲಿ ಮುಚ್ಚಿದ ಚಂದ್ರನ ಬೆಳದಿಂಗಳಂತೆ, ಹೊಗೆಯಲ್ಲಿ ಮರೆಯಾಗಿರುವ ಬೆಂಕಿಯಂತೆ ಅವಳು ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮುಂದೆ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ಪವಿತ್ರ ಪಾದ ಸ್ಪರ್ಶದಿಂದ ಅಹಲ್ಯ ಶಾಪಮುಕ್ತಳಾಗಿ ಸ್ವರ್ಗ ಸೇರಿದಳು. ಈ ರೀತಿ ಅಹಲ್ಯಳ ಅಮಾಯಕತೆ ಎಲ್ಲರಿಗೂ ಒಂದು ನೀತಿಪಾಠವಾಗಿದೆ.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೫) ದಮಯಂತಿ :

ದಮಯಂತಿ ವಿದರ್ಭ ರಾಜ್ಯದ ರಾಜಕುಮಾರಿಯಾಗಿದ್ದಳು. ಅವಳು ಅತ್ಯಂತ ಸೌಂದರ್ಯವತಿಯಾಗಿದ್ದಳು. ಅವಳ ಸೌಂದರ್ಯಕ್ಕೆ ಸೋತು ದೇವತೆಗಳಾದ ಇಂದ್ರ, ಅಗ್ನಿ, ಯಮ ಮತ್ತು ವರುಣರು ಸಹ ಅವಳ ಸ್ವಯಂವರದಲ್ಲಿ ಭಾಗವಹಿಸಿದ್ದರು. ಆದರೆ ದಮಯಂತಿ ನಿಷಾದ ರಾಜ್ಯದ ರಾಜಕುಮಾರ ನಳನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅದಕ್ಕಾಗಿ ಆಕೆ ದೇವತೆಗಳನ್ನು ಬಿಟ್ಟು ನಳನೊಂದಿಗೆ ಮದುವೆಯಾದಳು. ದಮಯಂತಿ ಮಹಾಭಾರತದ ಅತ್ಯಂತ ಸುಂದರ ಹೆಣ್ಣು ಎಂಬಿತ್ಯಾದಿ ವರ್ಣನೆಗಳಿವೆ….

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೬) ಮೋಹಿನಿ :

ಹಿಂದು ಪುರಾಣಗಳಲ್ಲಿನ ಅತ್ಯಂತ ಸುಂದರವಾದ ಹೆಣ್ಣೆಂದರೆ ಮೋಹಿನಿ ಮಾತ್ರ. ಮೋಹಿನಿಯ ಮೇಲೆ ಮೋಹಗೊಳ್ಳದ ದೇವತೆ ಅಥವಾ ದಾನವ ಇರಲಿಲ್ಲ. ಪ್ರತಿಯೊಬ್ಬರು ಮೋಹಿನಿಯ ಮಾಯೆಗೆ ಒಳಗಾಗಿದ್ದಾರೆ. ಸಮುದ್ರ ಮಂಥನ ಸಮಯದಲ್ಲಿ ಅಮೃತ ಸಿಕ್ಕಾಗ ದೇವತೆಗಳಿಗೂ ಮತ್ತು ದಾನವರಿಗೂ ಮತ್ತೆ ಘೋರ ಯುದ್ಧ ಶುರುವಾಯಿತು. ಏಕೆಂದರೆ ಅಮೃತವನ್ನು ಪಾನಿಸಿದರೆ ಅಮರತ್ವ ಸಿಗುವುದೆಂದು ಗೊತ್ತಾಗಿತ್ತು. ಅದಕ್ಕಾಗಿ ಅಮರತ್ವದ ಆಸೆಗಾಗಿ ಅಮೃತವನ್ನು ಪಾಣಿಸಲು ದೇವತೆಗಳಿಗೂ ಮತ್ತು ದಾನವರಿಗೂ ಕದನ ಶುರುವಾಯಿತು. ದಾನವರಿಗೆ ಅಮೃತವನ್ನು ಕೊಡುವ ಮನಸ್ಸು ದೇವತೆಗಳಿಗೆ ಇರಲಿಲ್ಲ. ಅದಕ್ಕಾಗಿ ಸಾಕ್ಷಾತ್ ಮಹಾ ವಿಷ್ಣುವೇ ಮೋಹಿನಿಯ ಅವತಾರ ತಾಳಿದನು. ಮೋಹಿನಿಯ ಸೌಂದರ್ಯಕ್ಕೆ ಸಾಟಿಯಾದದ್ದು ಯಾವುದು ಇರಲಿಲ್ಲ. ಮೋಹಿನಿಯನ್ನು ಕಂಡ ಕ್ಷಣದಲ್ಲೇ ದಾನವರ ಸಮೇತ ದೇವತೆಗಳು ಸಹ ಮರುಳಾದರು. ದಾನವರು ಮೋಹಿನಿ ಹೇಳಿದಂತೆ ಕೇಳತೊಡಗಿದರು. ಅಲ್ಲದೆ ಅವರು ಮೋಹಿನಿಯ ಸೌಂದರ್ಯದ ಸೆಳೆತಕ್ಕೆ ಒಳಗಾಗಿ ಅಮೃತವನ್ನು ಮರೆತು ಬಿಟ್ಟರು. ಮೋಹಿನಿ ನೃತ್ಯ ಮಾಡುತ್ತಾ ಬರೀ ದೇವತೆಗಳಿಗಷ್ಟೇ ಅಮೃತವನ್ನು ಪಾನಿಸಲು ಪ್ರಾರಂಭಿಸಿದಳು. ಅವಳ ವಂಚನೆ ರಾಹು ಎಂಬ ರಾಕ್ಷಸನಿಗೆ ಗೊತ್ತಾಯಿತು. ಆತ ಅಮೃತವನ್ನು ಪಾನಿಸುವುದಕ್ಕಾಗಿ ದೇವತೆಯ ವೇಷ ಧರಿಸಿ ದೇವತೆಗಳ ಸಾಲಿನಲ್ಲಿ ಬಂದು ಕುಳಿತು ಅಮೃತವನ್ನು ಪಾನಿಸಿದನು. ಆದರೆ ಅವನ ಕುಟಿಲತೆ ಮೋಹಿನಿಗೆ ಗೊತ್ತಾದಾಗ ಆಕೆ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಅವನ ಶಿರಛೇಧನ ಮಾಡಿದಳು. ಅದೇ ರೀತಿ ನೃತ್ಯ ಮಾಡುತ್ತಾ ಮೋಹಿನಿ ಅಮೃತವನ್ನೆಲ್ಲ ಬರೀ ದೇವತೆಗಳಿಗಷ್ಟೇ ಪಾನಿಸಿ ಅವರಿಗೆ ಅಮರತ್ವವನ್ನು ಕರುಣಿಸಿ ದೇವತೆಗಳನ್ನು ರಕ್ಷಿಸಿದಳು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಮೋಹಿನಿಯ ಮಾಯೆಗಳು ಸುಲಭವಾಗಿ ಮುಗಿಯುವಂಥದ್ದಲ್ಲ. ಮೋಹಿನಿ ಪುರುಷರಲ್ಲಿ ಪ್ರೀತಿಯ ಆಸೆಯನ್ನು ಬಿತ್ತಿ ಅವರನ್ನು ತನ್ನ ಕೈವಶ ಮಾಡಿಕೊಂಡು ಕೈಬೆರಳ ಸನ್ನೆಯ ಮೇಲೆ ಕುಣಿಸುತ್ತಾಳೆ. ಮೋಹಿನಿಯ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇಂದ್ರಿಯಗಳನ್ನು ಜಯಿಸಿದ ಶಿವನು ಸಹ ಮೋಹಿನಿಯ ಸೌಂದರ್ಯಕ್ಕೆ ಸೋತು ಅವಳನ್ನು ಬೆನ್ನಟ್ಟಿದನು. ಆತ ಅವಳನ್ನು ಮದುವೆಯಾಗಲು ಸಹ ಸಿದ್ಧನಿದ್ದನು. ಶಿವ ಮೋಹಿನಿಯನ್ನು ಬಲವಂತವಾಗಿ ಅಪ್ಪಿಕೊಂಡಾಗ ಮೋಹಿನಿ ತನ್ನ ನಿಜ ರೂಪವನ್ನು ಅವನಿಗೆ ಪ್ರದರ್ಶಿಸಿ “ಮೋಹಿನಿಯ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ…” ಎಂದೇಳಿ ಮಾಯವಾದಳು. ಕಾಮ ಎನ್ನುವುದು ದೇವಾನು ದೇವತೆಗಳನ್ನು ಸಹ ಬಿಟ್ಟಿಲ್ಲ ಎಂಬುದು ಮೋಹಿನಿಯ ಈ ಮಾಯೆಯಿಂದ ಸಾಬೀತಾಗುತ್ತದೆ.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಒಬ್ಬ ರಾಕ್ಷಸ ಶಿವನನ್ನು ಕುರಿತು ಘೋರ ತಪಸ್ಸು ಮಾಡಿ “ನಾನು ಯಾರ ತಲೆ ಮೇಲೆ ಕೈಯಿಡುತ್ತೇನೆಯೋ ಅವರು ಸುಟ್ಟು ಭಸ್ಮವಾಸಬೇಕು” ಎಂಬ ವಿಚಿತ್ರ ವರವನ್ನು ಪಡೆದುಕೊಂಡನು. ಆ ರಾಕ್ಷಸ ಕಂಡಕಂಡವರ ತಲೆ ಮೇಲೆ ಕೈಯಿಟ್ಟು ಅವರನ್ನೆಲ್ಲ ಸುಟ್ಟು ಭಸ್ಮ ಮಾಡಲು ಪ್ರಾರಂಭಿಸಿದ್ದರಿಂದ ಅವನು ಭಸ್ಮಾಸುರನೆಂದು ಪ್ರಸಿದ್ಧನಾದನು. ದಿನ ಕಳೆದಂತೆ ಅವನ ಶತ್ರುಗಳೆಲ್ಲ ಸುಲಭವಾಗಿ ನಾಶವಾಗಿದ್ದರಿಂದ ಭಸ್ಮಾಸುರನಿಗೆ ಅಹಂಕಾರ ಹೆಚ್ಚಾಯಿತು. ಅದಕ್ಕಾಗಿ ಆತ ಶಿವನ ತಲೆ ಮೇಲೆ ಕೈಯಿಟ್ಟು ಶಿವನನ್ನು ಸುಟ್ಟು ಭಸ್ಮ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದನು. ಅವನಿಂದ ತಪ್ಪಿಸಿಕೊಂಡು ಶಿವ ಕೈಲಾಸ ಪರ್ವತದಿಂದ ಬೇರೆಡೆಗೆ ಓಡಿದನು. ಆತ ಶಿವನ ತಲೆ ಮೇಲೆ ಕೈಯಿಡುವುದಕ್ಕಾಗಿ ಅವನನ್ನು ಬೆನ್ನಟ್ಟಿದನು. ಭಸ್ಮಾಸುರನಿಗೆ ಹೆದರಿ ಓಡುತ್ತಿರುವ ಶಿವನನ್ನು ಕಾಪಾಡುವುದಕ್ಕಾಗಿ ಮೋಹಿನಿ ಭಸ್ಮಾಸುರನ ಎದುರು ಪ್ರತ್ಯಕ್ಷಳಾದಳು. ಮೋಹಿನಿಯ ಮೈಮಾಟಕ್ಕೆ ಭಸ್ಮಾಸುರ ಮರುಳಾಗಿ ಅವಳನ್ನು ಮದುವೆಯಾಗುವ ಮನದಾಸೆಯನ್ನು ವ್ಯಕ್ತಪಡಿಸಿದನು. ಆವಾಗ ಮೋಹಿನಿ ಅವನಿಗೆ ನೀನು ನೃತ್ಯದಲ್ಲಿ ನನ್ನನ್ನು ಮೆಚ್ಚಿಸಿದರೆ ನಾನು ನಿನ್ನನ್ನು ಮದುವೆಯಾಗುವೆ ಎಂದೇಳಿ ನೃತ್ಯ ಮಾಡಲು ಪ್ರಾರಂಭಿಸಿದಳು. ಮೋಹಿನಿಯನ್ನು ನೋಡಿ ಭಸ್ಮಾಸುರನು ಕುಣಿಯಲು ಪ್ರಾರಂಭಿಸಿದನು. ಮೋಹಿನಿ ಹಾಗೆಯೇ ಕುಣಿಯುತ್ತಾ ಸುಸ್ತಾಗಿ ಕೊನೆಗೆ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡಳು. ಅವಳ ಸೌಂದರ್ಯದ ಸೆಳೆತಕ್ಕೆ ಸೋತು ಹೋಗಿದ್ದ ಭಸ್ಮಾಸುರನು ಸಹ ತಲೆಯ ಮೇಲೆ ಕೈಯಿಟ್ಟುಕೊಂಡನು. ಕೂಡಲೇ ಭಸ್ಮಾಸುರ ಸುಟ್ಟು ಭಸ್ಮವಾದನು. ಈ ರೀತಿ ಮೋಹಿನಿ ಉಪಾಯದಿಂದ ಭಸ್ಮಾಸುರರನ್ನು ಕೊಂದು ಶಿವನನ್ನು ಕಾಪಾಡಿದಳು. ಈ ರೀತಿ ಮೋಹಿನಿಯ ಮಾಯೆಗಳು ರೋಚಕವಾಗಿ ಸಾಗುತ್ತವೆ.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೭) ರುಕ್ಮಿಣಿ :

ರುಕ್ಮಿಣಿ ಸಾಕ್ಷಾತ್ ಲಕ್ಷ್ಮೀದೇವಿಯ ಅವತಾರವಾಗಿದ್ದಾಳೆ. ಮಹಾಭಾರತದಲ್ಲಿ ಬರುವ ಸುಂದರಿಯರಲ್ಲಿ ಇವಳಿಗೆ ಅತ್ಯುನ್ನತವಾದ ಸ್ಥಾನವಿದೆ. ರುಕ್ಮಿಣಿ ವಿದರ್ಭ ದೇಶದ ರಾಜ ಭೀಷ್ಮಕನ ಮುದ್ದಿನ ಮಗಳಾಗಿದ್ದಳು. ಅವಳ ಸೌಂದರ್ಯದ ಗುಣಗಾನ ದಶ ದಿಕ್ಕುಗಳಿಗೂ ಹಬ್ಬಿತ್ತು. ದ್ವಾಪರಯುಗದ ಪ್ರತಿಯೊಬ್ಬ ರಾಜ ಅವಳನ್ನು ಮದುವೆಯಾಗಲು ಹಂಬಲಿಸುತ್ತಿದ್ದನು. ಶಿಶುಪಾಲ ರುಕ್ಮಿಣಿಯನ್ನು ಮದುವೆಯಾಗಲು ತುದಿಗಾಲ ಮೇಲೆ ನಿಂತಿದ್ದನು. ಆದರೆ ರುಕ್ಮಿಣಿ ಭಗವಾನ್ ಶ್ರೀಕೃಷ್ಣನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಸುಂದರಿ ರುಕ್ಮಿಣಿ ತಾನೆಂದುಕೊಂಡಂತೆ ಶ್ರೀಕೃಷ್ಣನಿಗೆ ತನ್ನನ್ನು ಸಮರ್ಪಿಸಿಕೊಂಡಳು….

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೮) ದ್ರೌಪದಿ :

ದ್ರೌಪದಿ ಮಹಾಭಾರತದಲ್ಲಿನ ಅತ್ಯಂತ ಸುಂದರವಾದ ಸ್ತ್ರೀ. ಅವಳ ಬಗ್ಗೆ ಸರಿಸುಮಾರು ಎಲ್ಲರೂ ಕೇಳಿರುತ್ತಾರೆ, ಓದಿರುತ್ತಾರೆ. ಏಕೆಂದರೆ ಮಹಾಭಾರತ ಆಗಿರುವುದು ಅವಳಿಂದಲೇ ಅಲ್ಲವೇ? ದ್ರೌಪದಿ ದ್ರುಪದ ರಾಜನ ಯಜ್ಞ ಕುಂಡದ ಬೆಂಕಿಯಿಂದ ಜನಿಸಿ ಬಂದವಳು. ಅವಳ ಸೌಂದರ್ಯ ಎಲ್ಲರನ್ನೂ ಆಯಸ್ಕಾಂತದಂತೆ ಸೆಳೆಯುತ್ತಿತ್ತು. ಅವಳ ಸ್ವಯಂವರಕ್ಕೆ ರಾಜಮಹಾರಾಜರು, ಶೂರಾಧಿ ಶೂರರು ಭಾಗವಹಿಸಿದ್ದರು. ಆದರೆ ದ್ರೌಪದಿಯನ್ನು ಅರ್ಜುನ ಜಯಿಸಿದನು. ನಂತರ ದ್ರೌಪದಿ ಒಂದು ಸಣ್ಣ ಯಡವಟ್ಟಿನಿಂದಾಗಿ ಪಂಚ ಪಾಂಡವರ ಪತ್ನಿಯಾದಳು. ಆದರೆ ಅವಳು ಮುಂಚೆ ಕರ್ಣನನ್ನು ಪ್ರೀತಿಸುತ್ತಿದ್ದಳು. ದ್ರೌಪದಿ ದುರ್ಯೋಧನನಿಗೆ ಮಾಡಿದ ಅವಮಾನದಿಂದಾಗಿ ಆತ ದುಷ್ಟನಾದನು. ಅವನ ದುಷ್ಟತನ ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿತು. ಅದೇನೆ ಇದ್ದರೂ ದ್ರೌಪದಿಯ ಸೌಂದರ್ಯಕ್ಕೆ ಸರಿಸಾಟಿಯಾದವರು ಮಹಾಭಾರತದಲ್ಲಿ ಯಾರು ಇರಲಿಲ್ಲ. ದ್ರೌಪದಿಗೂ ಹಾಗೂ ರುಕ್ಮಿಣಿಗೂ ಸೌಂದರ್ಯದಲ್ಲಿ ಕೆಲವು ಸಾಮ್ಯ ವರ್ಣನೆಗಳು ಸಿಕ್ಕಿವೆ. ಆದರೆ ದ್ರೌಪದಿ ಸೌಂದರ್ಯದಲ್ಲಿ ತನ್ನ ಅಗ್ರತೆಯನ್ನು ಕಾಯ್ದುಕೊಂಡಿದ್ದಾಳೆ…

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

೯) ಸೀತೆ :

ಸೀತೆ ರಾಮಾಯಣದ ಕಥಾನಾಯಕಿ. ಶ್ರೀರಾಮಚಂದ್ರನ ಮುದ್ದಿನ ಮಡದಿ. ರಾವಣ ಸೀತೆಯನ್ನು ಅಪಹರಿಸಿದ್ದರಿಂದಲೇ ರಾಮಾಯಣವಾಯಿತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಸೀತೆ ರಾಮಾಯಣದಲ್ಲಿ ಬರುವ ಅತ್ಯಂತ ಸುಂದರವಾದ ಹೆಣ್ಣು. ಸೀತೆಯ ಸೌಂದರ್ಯದ ಬಗ್ಗೆ ಸಾಕಷ್ಟು ವರ್ಣನೆಗಳಿವೆ. ಆದರೆ ಸೀತೆ ತನ್ನ ಸೌಂದರ್ಯಕ್ಕಿಂತ ಸದ್ಗುಣಕ್ಕೆ ಹೆಚ್ಚಿನ ಪ್ರಖ್ಯಾತಿಯನ್ನು ಪಡೆದಿದ್ದಾಳೆ. ಸೀತೆ ಮಿಥಿಲೆಯ ರಾಜ ಜನಕನ ಸಾಕು ಮಗಳು. ಸೀತೆ ಭೂತಾಯಿಯ ಮಡಿಲಿನಿಂದ ಜನಕನಿಗೆ ಸಿಕ್ಕಿದ್ದಳು. ಆಕೆ ಯೌವ್ವನಾವಸ್ಥೆಗೆ ಬಂದಾಗ ಆಕೆಯ ಸದ್ಗುಣ, ಸೌಂದರ್ಯದ ಪ್ರಶಂಸೆ ನಾಲ್ಕು ದಿಕ್ಕುಗಳಲ್ಲಿ ಮಾರ್ದನಿಸಿತ್ತು. ಅದಕ್ಕಾಗಿ ಸೀತೆಯ ಸ್ವಯಂವರದಲ್ಲಿ ರಾಜಮಹಾರಾಜರು, ವೀರಶೂರರೆಲ್ಲ ಭಾಗವಹಿಸಿದ್ದರು. ಆದರೆ ಶ್ರೀರಾಮ ಶಿವ ಧನಸ್ಸನ್ನು ಮುರಿದು ಸೀತೆಯನ್ನು ವಿವಾಹವಾದನು.

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಮೂರು ಲೋಕಗಳನ್ನು ಜಯಿಸಿದ ರಾವಣನ ಬಳಿ ಸ್ವರ್ಗದ ಸುಂದರಿಯರು, ಅಪ್ಸರೆಯರಿದ್ದರೂ ಸಹ ಆತ ಸೀತೆಯ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನು ಅಪಹರಿಸಿದನು ಎಂದರೆ ಸೀತೆಯ ಸೌಂದರ್ಯವನ್ನು ನೀವು ಊಹಿಸಬಹುದು. ಸೀತೆಯ ಸೌಂದರ್ಯಕ್ಕೆ ಸರಿಸಾಟಿಯಾದವರು ಯಾರಿಲ್ಲ. ಆದರೆ ಸೀತೆ ಸುಂದರಿಯಾಗಿದ್ದರೂ ಸುಖಿಯಾಗಿರಲಿಲ್ಲ ಎಂಬ ಮಾತುಗಳಿವೆ. ಏಕೆಂದರೆ ಆಕೆ ಮದುವೆಯಾದ ನಂತರ ರಾಮನೊಂದಿಗೆ 14 ವರ್ಷ ವನವಾಸಕ್ಕೆ ತೆರಳಬೇಕಾಯಿತು. ಅಲ್ಲಿ ಅವಳನ್ನು ರಾವಣ ಅಪಹರಿಸಿದನು. ಮುಂದೆ ರಾಮ ರಾವಣನನ್ನು ಕೊಂದು ಅವಳನ್ನು ಪುನ: ಸೇರಿ ಅಯೋಧ್ಯೆಗೆ ಮರಳಿದನು. ಆದರೆ ಮೂರ್ಖ ಅಗಸನ ಚುಚ್ಚು ಮಾತಿಗೆ ಹೆದರಿ ರಾಮ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದನು. ಇಷ್ಟೆಲ್ಲ ಸಂಕಟಗಳನ್ನು ಸಹಿಸಿದರೂ ಸೀತೆ ಸದ್ಗುಣಿಯಾಗಿ ಉಳಿಯುತ್ತಾಳೆ. ಅದಕ್ಕಾಗಿ ಸೀತೆ ತನ್ನ ಸೌಂದರ್ಯಕ್ಕಿಂತ ಹೆಚ್ಚಾಗಿ ಸದ್ಗುಣಗಳಿಂದ ಗುರ್ತಿಸಲ್ಪಡುತ್ತಾಳೆ….

9 ಸುರಸುಂದರಿಯರು : 9 Beautiful Women from Ramayana and Maha Bharat in Kannada

ಇದಿಷ್ಟು ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ 9 ಸುರಸುಂದರಿಯರ ಸಣ್ಣ ಕಥೆ. ಈ ಕಥೆಗಳು ನಿಮಗಿಷ್ಟವಾಗಿದ್ದರೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ಇದನ್ನು ನಿಮ್ಮ ಆಪ್ತರೊಂದಿಗೆ ಶೇರ್ ಮಾಡಿ…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books