ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು – Tales of Tenali Ramakrishna in Kannada

You are currently viewing ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು – Tales of Tenali Ramakrishna in Kannada

ಶ್ರೀಕೃಷ್ಣ ದೇವರಾಯನ ಆಸ್ಥಾನದ ಆಶ್ರಯ ಸಿಕ್ಕಿದ್ದರಿಂದ ತೆನಾಲಿ ರಾಮಕೃಷ್ಣ ಸಂತಸದ ಕಡಲಲ್ಲಿ ತೇಲಾಡುತ್ತಿದ್ದನು. ಆದರೆ ಶ್ರೀಕೃಷ್ಣ ದೇವರಾಯನಿಗೆ ತೆನಾಲಿ ರಾಮಕೃಷ್ಣನನ್ನು ಪರೀಕ್ಷಿಸುವ ಆಸೆಯಾಯಿತು. ಅದಕ್ಕಾಗಿ ಆತ ಅರಮನೆಯ ದ್ವಾರ ಪಾಲಕರಿಗೆ ಆಮಿಷವೊಡ್ಡಿ ಅಕ್ರಮವಾಗಿ ಅರಮನೆ ಪ್ರವೇಶ ಮಾಡಿದ್ದನ್ನು ಘೋರ ಅಪರಾಧವೆಂದು ಪರಿಗಣಿಸಿ ತೆನಾಲಿ ರಾಮಕೃಷ್ಣನಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದನು. ಜೊತೆಗೆ ಶಿರಚ್ಛೇದನ ಮಾಡಬೇಕೆಂದು ಆಜ್ಞಾಪಿಸಿದನು. ರಾಜಾಜ್ಞೆಯ ಮೇರೆಗೆ ಸೈನಿಕರು ರಾಮಕೃಷ್ಣನನ್ನು ಶಿರಚ್ಛೇದನ ಮಾಡುವುದಕ್ಕಾಗಿ ಕೋಟೆಯ ಹೊರಗಡೆ ಕರೆದುಕೊಂಡು ಹೋದರು. ತೆನಾಲಿ ರಾಮಕೃಷ್ಣನಿಗೆ ಇದು ರಾಯನ ಮಹಾ ಪರೀಕ್ಷೆಯೆಂಬುದು ಮನದಟ್ಟಾಯಿತು. ಅದಕ್ಕಾಗಿ ಆತ ಹೆದರದೆ ಮನದಲ್ಲಿ ಕಾಳಿಮಾತೆಯನ್ನು ನೆನೆಯುತ್ತಾ ಸಂತೋಷದಿಂದ ಸೈನಿಕರೊಂದಿಗೆ ಹೆಜ್ಜೆ ಹಾಕಿದನು.

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ರಾಜಾಜ್ಞೆಯ ಅನುಸಾರ ಸೈನಿಕರು ರಾಮಕೃಷ್ಣನ ಶಿರಚ್ಛೇದನ ಮಾಡಲು ಮುಂದಾದಾಗ ರಾಮಕೃಷ್ಣ ತನ್ನ ಜಾಣ್ಮೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದನು.

ರಾಮಕೃಷ್ಣ : ಅಯ್ಯಾ ಸೈನಿಕರೇ, ನಾನು ಕುಲದಿಂದ ಬ್ರಾಹ್ಮಣ. ಹೀಗಾಗಿ ನಾನು ಹಾಗೆಯೇ ಸಾಯುವಂತಿಲ್ಲ. ಅದಕ್ಕಾಗಿ ನನಗೆ ಸ್ನಾನ ಮಾಡಿ, ಸಂಧ್ಯಾವಂದನೆ ಮಾಡಲು ಅವಕಾಶ ಮಾಡಿಕೊಡಿ.

ಸೈನಿಕರು : ಆಯ್ತು ರಾಮಕೃಷ್ಣ. ಸಾಯುವ ಅಪರಾಧಿಯ ಕೊನೆಯಾಸೆಗಳನ್ನು ಪೂರೈಸುವುದು ನಮ್ಮ ಕರ್ತವ್ಯ. ಬೇಗನೆ ನಿನ್ನಾಸೆಗಳನ್ನು ಪೂರೈಸಿಕೊಂಡು ಸಾಯಲು ಸಿದ್ಧನಾಗು…

(ಸೈನಿಕರು ಬಹಳಷ್ಟು ಜಾಗರೂಕತೆಯಿಂದ ತೆನಾಲಿ ರಾಮಕೃಷ್ಣನನ್ನು ಒಂದು ಸರೋವರಕ್ಕೆ ಕರೆದುಕೊಂಡು ಹೋದರು. ರಾಮಕೃಷ್ಣ ಸರೋವರದಲ್ಲಿ ಸ್ನಾನ ಮಾಡಿ ಶುಚಿಯಾದ ನಂತರ ಸಂಧ್ಯಾವಂದನೆ ಮಾಡಿದನು. ನಂತರ ಸೈನಿಕರು ಅವನನ್ನು ಕೊಲ್ಲಲು ಮುಂದಾದಾಗ ಆತ ಮತ್ತೆ ತನ್ನ ಬುದ್ಧಿವಂತಿಕೆಯನ್ನು ಪ್ರಯೋಗಿಸಿದನು.)

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ರಾಮಕೃಷ್ಣ : ಅಯ್ಯಾ ಸೈನಿಕರೇ, ಸಂಧ್ಯಾವಂದನೆಯಾದ ನಂತರ ಊಟ ಮಾಡುವುದು ಬ್ರಾಹ್ಮಣರ ಪದ್ಧತಿ. ಹೀಗಾಗಿ ನೀವು ನನಗಾಗಿ ಊಟದ ಏರ್ಪಾಟು ಮಾಡುವಿರಾ? ನಾನು ಹಸಿವಿನಿಂದ ನರಳಿ ಸತ್ತರೆ ನಿಮಗೆ ನನ್ನ ಕರ್ಮ ತಟ್ಟುವುದು…

ಸೈನಿಕರು ರಾಮಕೃಷ್ಣನ ಕೋರಿಕೆಯಂತೆ ಅವನಿಗೆ ಹಣ್ಣು ಹಂಪಲುಗಳನ್ನು ನೀಡಿದರು. ಆತ ಅವುಗಳನ್ನು ಚೆನ್ನಾಗಿ ತಿಂದು ತೇಗಿದನು. ನಂತರ ಎಳೆ ನೀರುಗಳನ್ನು ಕುಡಿದು ಮಲಗಿದನು. ಸೈನಿಕರು ಅವನನ್ನು ಬಲವಂತವಾಗಿ ಎಬ್ಬಿಸಲು ಪ್ರಯತ್ನಿಸಿದಾಗ ಆತ “ಊಟವಾದ ನಂತರ ಸ್ವಲ್ಪ ನಿದ್ರಿಸುವುದು ಬ್ರಾಹ್ಮಣರ ಪದ್ಧತಿ. ಬ್ರಹ್ಮಹತ್ಯೆ ಮಹಾಪಾಪ. ನೀವು ಈಗಲೇ ನನ್ನ ಸಾಯಿಸಿದರೆ ಮಹಾ ಪಾಪವನ್ನು ಕಟ್ಟಿಕೊಳ್ಳುತ್ತಿರಾ…” ಎಂದೇಳಿ ಸೈನಿಕರನ್ನು ಹೆದರಿಸಿದನು. ಸೈನಿಕರು ಅವನನ್ನು ಸುಲಭವಾಗಿ ಕೊಲ್ಲಲಾಗುತ್ತಿಲ್ಲವಲ್ಲ ಎಂದು ಪರದಾಡುತ್ತಿರುವಾಗ ಆತ ಸ್ವಚ್ಛಂದವಾಗಿ ನಿದ್ರಿಸಿದನು. ನಂತರ ನಿದ್ದೆಯಿಂದೆದ್ದ ರಾಮಕೃಷ್ಣ ಸೈನಿಕರನ್ನು ಕರೆದು ರಾಜಾಜ್ಞೆಯನ್ನು ನೆರವೇರಿಸಲು ಹೇಳಿದನು.

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ರಾಮಕೃಷ್ಣ : ಸೈನಿಕರೇ, ನೀವು ನನ್ನ ಕೊನೆಯಾಸೆಗಳನ್ನು ನೆರವೇರಿಸಿ ಮಹದುಪಕಾರವನ್ನು ಮಾಡಿರುವಿರಿ. ನಿಮ್ಮನ್ನು ಕಾಳಿಮಾತೆ ಚೆನ್ನಾಗಿಡುತ್ತಾಳೆ ಚಿಂತಿಸದಿರಿ.

ಸೈನಿಕರು : ನಿನ್ನ ರಗಳೆ ಸಾಕು ರಾಮಕೃಷ್ಣ. ಬೇಗನೆ ಸಾಯಲು ಸಿದ್ಧನಾಗು…

ರಾಮಕೃಷ್ಣ : ನೀವು ರಾಜಾಜ್ಞೆಯನ್ನು ನಿರಾತಂಕವಾಗಿ ನೆರವೇರಿಸಿ, ನಂದೇನು ಅಭ್ಯಂತರವಿಲ್ಲ. ಆದರೆ ನನ್ನದೊಂದು ಕೊನೆಯ ಕೋರಿಕೆಯಿದೆ.

ಸೈನಿಕರು : ಏನದು ಹೇಳಿ ಸಾಯಿ…

ರಾಮಕೃಷ್ಣ : ನಾನು ಸರೋವರದಲ್ಲಿ ಇಳಿದು ಎದೆಮಟ್ಟದ ನೀರಿನಲ್ಲಿ ನಿಂತುಕೊಂಡು ಕಣ್ಮುಚ್ಚಿ ಕಾಳಿಮಾತೆಯನ್ನು ನೆನೆಯುತ್ತೇನೆ. ಆಗ ನೀವಿಬ್ಬರು ಒಂದೇ ಏಟಿಗೆ ನನ್ನ ತಲೆಯನ್ನು ಕತ್ತರಿಸಿ ರಾಜಾಜ್ಞೆಯನ್ನು ಪೂರ್ಣಗೊಳಿಸಿ…

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ತೆನಾಲಿ ರಾಮಕೃಷ್ಣ ಸರೋವರದಲ್ಲಿಳಿದು ಎದೆಮಟ್ಟದ ತನಕ ನೀರಲ್ಲಿ ನಿಂತುಕೊಂಡು ಕಣ್ಮುಚ್ಚಿ ಕಾಳಿಮಾತೆಯನ್ನು ನೆನೆಯಲು ಪ್ರಾರಂಭಿಸಿದನು. ಸೈನಿಕರು ಹರಿತವಾದ ಖಡ್ಗಗಳನ್ನು ಹಿಡಿದುಕೊಂಡು ರಾಮಕೃಷ್ಣನ ತಲೆಯನ್ನು ಕತ್ತರಿಸಲು ಸಿದ್ಧರಾದರು. ಸೈನಿಕರು ಖಡ್ಗವನ್ನು ಪ್ರಯೋಗಿಸುವ ಸಮಯಕ್ಕೆ ಸರಿಯಾಗಿ ರಾಮಕೃಷ್ಣ ನೀರಿನಲ್ಲಿ ಮುಳುಗಿದನು. ಸೈನಿಕರು ಗಾಳಿಯಲ್ಲಿ ಖಡ್ಗ ಬೀಸಿ ರಾಮಕೃಷ್ಣನನ್ನು ಕೊಲ್ಲಲಾಗದೆ ನಿರಾಶರಾದರು. ಒಂದೇ ಏಟಿನಲ್ಲಿ ರಾಮಕೃಷ್ಣನ ತಲೆ ತೆಗೆಯಬೇಕೆಂದು ಒಪ್ಪಂದವಾಗಿತ್ತು. ಆದರೆ ಒಂದೇ ಏಟಿನಲ್ಲಿ ಅವನ ತಲೆ ತೆಗೆಯುವಲ್ಲಿ ಸೈನಿಕರು ವಿಫಲರಾದರು. ಅದಕ್ಕಾಗಿ ಅವರು ಸಪ್ಪೆ ಮೋರೆ ಹಾಕಿಕೊಂಡು ಅರಮನೆಗೆ ಹಿಂತಿರುಗಿ ಶ್ರೀಕೃಷ್ಣ ದೇವರಾಯನಿಗೆ ನಡೆದ ಸಂಗತಿಯನ್ನು ವಿವರಿಸಿದರು. ರಾಯನಿಗೆ ರಾಮಕೃಷ್ಣನ ಜಾಣ್ಮೆಯನ್ನು ಕೇಳಿ ಖುಷಿಯಾಯಿತು. ಆದರೆ ಆತ ಅದನ್ನು ತೋರ್ಪಡಿಸದೆ ಕೋಪದಿಂದ “ರಾಜಾಜ್ಞೆ ಮೀರಿದ ರಾಜದ್ರೋಹಿಯನ್ನು ಬಂಧಿಸಿ ಅರಮನೆಯ ಆವರಣದಲ್ಲಿ ತಂದು ಆನೆಯ ಕಾಲಿನಿಂದ ತುಳಿಸಿ ಸಾಯಿಸಿ…” ಎಂದು ಗದರಿದನು.

ರಾಯನ ಆಜ್ಞೆಯನುಸಾರ ಸೈನಿಕರು ತೆನಾಲಿ ರಾಮಕೃಷ್ಣನನ್ನು ಬಂಧಿಸಿ ಅರಮನೆಯ ಆವರಣಕ್ಕೆ ತಂದರು. ನಂತರ ಒಂದು ದೊಡ್ಡ ಗುಂಡಿ ತೆಗೆದು ಅದರಲ್ಲಿ ರಾಮಕೃಷ್ಣನನ್ನು ಕೇವಲ ಕತ್ತು ಮಾತ್ರ ಕಾಣುವಂತೆ ಹೂಗಿದರು. ಸೈನಿಕರು ಆನೆಯನ್ನು ಕರೆ ತರುವುದಕ್ಕಾಗಿ ಗಜಶಾಲೆಗೆ ಹೋದರು. ರಾಮಕೃಷ್ಣ ತನ್ನ ಕುಲದೇವತೆ ಕಾಳಿಮಾತೆಯನ್ನು ನೆನೆಯುತ್ತಾ ಬಂದಿರುವ ಸಂಕಷ್ಟದಿಂದ ಪಾರಾಗಲು ದಾರಿಯನ್ನು ಯೋಚಿಸತೊಡಗಿದನು. ಅಷ್ಟರಲ್ಲಿ ಅವನ ಕಣ್ಣಿಗೆ ಬಟ್ಟೆ ಗಂಟುಗಳನ್ನು ಹೊತ್ತುಕೊಂಡು ಅವನ ಬಳಿಯಿಂದ ಹೋಗುತ್ತಿರುವ ಒಬ್ಬ ಗೂನು ಬೆನ್ನಿನ ಅಗಸ ಕಂಡನು. ರಾಮಕೃಷ್ಣನ ಅವಸ್ಥೆಯನ್ನು ಕಂಡು ಕನಿಕರದಿಂದ ಆ ಅಗಸ ಅವನನ್ನು ಮಾತಾಡಿಸಿದನು.

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ಅಗಸ : ಯಾರಯ್ಯ ನೀನು? ಏನು ನಿನ್ನ ಈ ಅವಸ್ಥೆ?

ರಾಮಕೃಷ್ಣ : ನನ್ನ ಹೆಸರು ರಾಮಣ್ಣ ಅಂತಾ. ನಾನು ಕೂಡ ಅಗಸರವನೇ. ಪಕ್ಕದ ಊರಿನವನು…

ಅಗಸ : ಅದು ಸರಿ, ಏನಿದು ನಿನ್ನ ಅವಸ್ಥೆ? ಯಾಕೆ ಈ ರೀತಿ ಮಣ್ಣಲ್ಲಿ ಹೂತುಕೊಂಡಿರುವೆ?

ರಾಮಕೃಷ್ಣ : ಬಟ್ಟೆಗಳನ್ನು ಹೊತ್ತು ನಾನು ಸಹ ಗೂನು ಬೆನ್ನಿನವನಾಗಿದ್ದೆ. ನನ್ನ ಗೆಳೆಯನೊಬ್ಬ ಹೇಳಿದ ಹೀಗೆ ಮಣ್ಣಲ್ಲಿ ಹೂಗಿದುಕೊಂಡು ಎರಡ್ಮೂರು ಗಂಟೆ ನಿಂತರೆ ಬೆನ್ನಿನ ಗೂನು ಮಂಗಮಾಯವಾಗುವುದೆಂದು. ಅದಕ್ಕೆ ಈ ರೀತಿ ಮಣ್ಣಲ್ಲಿ ಹೂತುಕೊಂಡಿರುವೆ…

ಅಗಸ : ಅಯ್ಯಾ ರಾಮಣ್ಣ, ನಿನ್ನ ಮಾತು ನಿಜವೇ? ನಾನು ನಿಷ್ಠೆಯಿಂದ ರಾಜ ಪರಿವಾರದವರ ಬಟ್ಟೆಗಳನ್ನು ಶುಚಿಗೊಳಿಸುತ್ತಾ ನನ್ನ ಕಾಯಕವನ್ನು ಮಾಡುತ್ತಾ ಬಂದೆ. ಬಟ್ಟೆಗಳ ಭಾರದಿಂದ ನನ್ನ ಬೆನ್ನು ಬಾಗಿತು. ಎಲ್ಲರೂ ನನ್ನನ್ನು ಅಪಹಾಸ್ಯ ಮಾಡಿಕೊಂಡು ನಗುತ್ತಾರೆ. ನನಗೆ ಈ ಬೆನ್ನು ಗೂನು ವಾಸಿಯಾದರೆ ಸಾಕಷ್ಟೇ…

ರಾಮಕೃಷ್ಣ : ಚಿಂತಿಸಬೇಡ ಗೆಳೆಯ, ನಾನಿಗಾಗಲೇ ಎರಡ್ಮೂರು ಗಂಟೆಗಳಿಂದ ಮಣ್ಣಲ್ಲಿ ಹೂತುಕೊಂಡಿರುವೆ. ನನ್ನ ಬೆನ್ನು ನೆಟ್ಟಗಾಗಿದೆ. ನನ್ನ ಸುತ್ತಲಿರುವ ಮಣ್ಣನ್ನು ಅಗೆದು ನನ್ನನ್ನು ಹೊರತೆಗೆದ ನಂತರ ನೀನು ಮಣ್ಣಲ್ಲಿ ಹೂತುಕೋ. ನಿನ್ನ ಬೆನ್ನ ಗೂನು ಸಹ ಮಾಯವಾಗುತ್ತದೆ…

ರಾಮಕೃಷ್ಣನ ಮಾತುಗಳನ್ನು ಕೇಳಿ ಪೆದ್ದ ಅಗಸ ಅವನನ್ನು ಹೊರತೆಗೆದು ತಾನು ಮಣ್ಣಲ್ಲಿ ಹೂತುಕೊಂಡನು. ನಂತರ ತೆನಾಲಿ ರಾಮಕೃಷ್ಣ ಅವನ ಬಟ್ಟೆಗಳನ್ನು ಹೊತ್ತುಕೊಂಡು ಗೂನು ಬೆನ್ನಿನ ಅಗಸನಂತೆ ಅರಮನೆ ಕಡೆಗೆ ಹೊರಟನು. ಗೂನು ಬೆನ್ನಿನ ಅಗಸನಂತೆ ರಾಮಕೃಷ್ಣ ಅರಮನೆ ಪ್ರವೇಶಿಸಿ ರಾಜಪರಿವಾರದ ಉಸ್ತುವಾರಿ ಮುಖ್ಯಸ್ಥನಿಗೆ ತಂದ ಶುಚಿ ಬಟ್ಟೆಗಳನ್ನು ತಲುಪಿಸಿದನು. ಯಾರಿಗೂ ಸಹ ರಾಮಕೃಷ್ಣನ ಮೇಲೆ ಎಳ್ಳಷ್ಟು ಅನುಮಾನ ಬರಲಿಲ್ಲ. ಅವನ ನಟನೆ ಅಷ್ಟೊಂದು ನೈಜವಾಗಿತ್ತು.

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ಸೈನಿಕರು ಗಜಶಾಲೆಯಿಂದ ಒಂದು ಆನೆ ತೆಗೆದುಕೊಂಡು ರಾಮಕೃಷ್ಣನನ್ನು ಹೂತಿದ್ದ ಸ್ಥಳದೆಡೆಗೆ ಬರತೊಡಗಿದರು. ಸೈನಿಕರೊಂದಿಗೆ ಬರುತ್ತಿದ್ದ ದೊಡ್ಡ ಆನೆಯನ್ನು ನೋಡಿ ಅಗಸ ಜೋರಾಗಿ ಕಿರುಚಿಕೊಳ್ಳಲು ಪ್ರಾರಂಭಿಸಿದನು. ಸೈನಿಕರಿಗೆ ಇದು ರಾಮಕೃಷ್ಣನ ಧ್ವನಿಯಲ್ಲವೆಂಬುದು ಖಾತ್ರಿಯಾಯಿತು. ಅದಕ್ಕವರು ಅವನ ಸನಿಹ ಹೋದರು. ಅವರಿಗೆ ಕಿರುಚುತ್ತಿರುವುದು ಅಮಾಯಕ ಅಗಸ ಎಂಬುದು ಗೊತ್ತಾಯಿತು. ಉಪಾಯದಿಂದ ಅಗಸನನ್ನು ಮಣ್ಣಿನ ಗುಂಡಿಯಲ್ಲಿ ಇಳಿಸಿ ಪರಾರಿಯಾದ ತೆನಾಲಿ ರಾಮಕೃಷ್ಣನ ಮೇಲೆ ಸೈನಿಕರು ಸಿಟ್ಟಾದರು. ಈ ಸಲವೂ ಆತ ಬದುಕುಳಿದನಲ್ಲವೆಂದು ಅವರು ಬೇಸರಿಸಿದರು. ಅವರು ಅರಮನೆಗೆ ಹೋಗಿ ನಡೆದ ಸಂಗತಿಯನ್ನು ವಿವರಿಸಬೇಕು ಎನ್ನುವಷ್ಟರಲ್ಲಿ ಗುಪ್ತಚರರ ಮೂಲಕ ಶ್ರೀಕೃಷ್ಣ ದೇವರಾಯನಿಗೆ ತೆನಾಲಿ ರಾಮಕೃಷ್ಣ ಉಪಾಯದಿಂದ ಪಾರಾಗಿದ್ದು ಗೊತ್ತಾಗಿತ್ತು.

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

ಅರಮನೆಯಲ್ಲಿನ ಯಾರಿಗೂ ಸಹ ರಾಮಕೃಷ್ಣನ ಗುರುತು ಸಿಗಲಿಲ್ಲ. ಸೈನಿಕರು ಬಂದು ನಡೆದ ಸಂಗತಿಯನ್ನು ವಿವರಿಸುವಾಗ ತೆನಾಲಿ ರಾಮಕೃಷ್ಣ ತನ್ನ ನಿಜ ವೇಷದಲ್ಲಿ ಪ್ರತ್ಯಕ್ಷನಾದನು. ಅವನನ್ನು ನೋಡಿ ಸೈನಿಕರು ರಾಯನಿಗೆ ಅವನ ಕುಚೇಷ್ಟಗಳನ್ನು ವಿವರಿಸಿದರು. ರಾಜಾಜ್ಞೆಗೆ ಭಂಗ ಬರದಂತೆ ಉಪಾಯ ಮಾಡಿ ಪ್ರಾಣಾಪಾಯದಿಂದ ಪಾರಾದ ರಾಮಕೃಷ್ಣನ ಮೇಲೆ ರಾಯನಿಗೆ ಹೆಮ್ಮೆಯಿತ್ತು. ಆದರೂ ಆತ ರಾಮಕೃಷ್ಣನ ಕಾಲೆಳೆಯಲು ಕೋಪಿಸಿಕೊಂಡವನಂತೆ ನಟಿಸತೊಡಗಿದನು. ಆವಾಗ ರಾಮಕೃಷ್ಣ “ಪ್ರಭು,, ನಾನು ಕಾಳಿಮಾತೆಯ ಅನುಗ್ರಹದಿಂದ ನಿಮ್ಮ ಆಶ್ರಯ ಬಯಸಿ ಇಲ್ಲಿಗೆ ಬಂದಿರುವೆ. ನನಗೆ ನಿಮ್ಮ ಆಸ್ಥಾನದಲ್ಲಿ ವಿದೂಷಕನಾಗಿದ್ದುಕೊಂಡು ನಿಮ್ಮೆಲ್ಲರನ್ನು ರಂಜಿಸುವ ಮಹದಾಸೆಯಿದೆ. ಅದಕ್ಕೆ ಹೀಗೆ ಉಪಾಯದಿಂದ ನೀವು ವಿಧಿಸಿದ ಶಿಕ್ಷೆಯಿಂದ ಪಾರಾಗಿರುವೆ. ದಯವಿಟ್ಟು ನನ್ನನ್ನು ಕ್ಷಮಿಸಿ, ರಕ್ಷಿಸಿ…” ಎಂದೇಳಿ ರಾಯನ ಮನಗೆಲ್ಲಲು ಪ್ರಯತ್ನಿಸಿದನು. ರಾಮಕೃಷ್ಣನ ನಯವಿನಯತೆಗೆ, ಹಾಸ್ಯಪ್ರಜ್ಞೆಗೆ, ಜಾಣ್ಮೆಗೆ ಮನಸೋತು ಶ್ರೀಕೃಷ್ಣ ದೇವರಾಯ ತೆನಾಲಿ ರಾಮಕೃಷ್ಣನನ್ನು ಮನ್ನಿಸಿದನು. ರಾಯ ವಿಧಿಸಿದ ಮಹಾ ಮರಣದಂಡನೆಯ ಪರೀಕ್ಷೆಯಿಂದ ಪಾರಾದೆನಲ್ಲ ಎಂಬ ಸಂತಸದಲ್ಲಿ ರಾಮಕೃಷ್ಣ ನಗೆಹನಿಗಳನ್ನು ಹೇಳಿ ಆಸ್ಥಾನದಲ್ಲಿದ್ದ ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದನು… To be Continued…

ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books